ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದರಿಂದ ವಾರ್ಷಿಕ ₹85 ಸಾವಿರ ಕೋಟಿಯಿಂದ ₹2.5 ಲಕ್ಷ ಕೋಟಿ ವರೆಗೆ ವರಮಾನ ನಷ್ಟವಾಗಲಿದೆ. ಈ ನಷ್ಟವನ್ನು ತುಂಬಿ ಕೊಡಬೇಕು ಎಂದು ಕರ್ನಾಟಕ ಸೇರಿ ಎಂಟು ರಾಜ್ಯಗಳು ಹಕ್ಕೊತ್ತಾಯ ಮಂಡಿಸಿವೆ.
ಸಮಾನ ಮನಸ್ಕ ರಾಜ್ಯಗಳ ಹಣಕಾಸು ಸಚಿವರು ಶುಕ್ರವಾರ ಇಲ್ಲಿ ಸಭೆ ಸೇರಿ ಜಿಎಸ್‌ಟಿ ಸರಳೀಕರಣದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದರು. ತಮ್ಮ ರಾಜ್ಯಗಳ ಹಿತ ರಕ್ಷಿಸಲು ಸೆಪ್ಟೆಂಬರ್ 3 ಮತ್ತು 4ರಂದು ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಡಲು ತೀರ್ಮಾನಿಸಿದರು.
2017ರಲ್ಲಿ ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಸಂದರ್ಭದಲ್ಲಿ ರಾಜ್ಯಕ್ಕೆ ₹25 ಸಾವಿರ ಕೋಟಿಯಿಂದ ₹30 ಸಾವಿರ ಕೋಟಿಯಷ್ಟು ನಷ್ಟ ಉಂಟಾಯಿತು. ವರಮಾನ ನಷ್ಟ ಸರಿದೂಗಿಸಲು ರಾಜ್ಯಗಳಿಗೆ ಐದು ವರ್ಷ ಪರಿಹಾರ ನೀಡಲಾಯಿತು. ಪರಿಹಾರ ವ್ಯವಸ್ಥೆಯನ್ನು ಇನ್ನಷ್ಟು ವರ್ಷ ಮುಂದುವರಿಸಬೇಕು ಎಂಬ ರಾಜ್ಯದ ಮನವಿಗೆ ಕೇಂದ್ರ ಕಿವಿಗೊಡಲಿಲ್ಲ. ಹೊಸ ವ್ಯವಸ್ಥೆ ಜಾರಿಗೆ ಬಂದರೆ ರಾಜ್ಯಕ್ಕೆ ವಾರ್ಷಿಕ ₹15 ಸಾವಿರ ವರಮಾನ ಖೋತಾ ಆಗಲಿದೆ. ಅದನ್ನು ಕೇಂದ್ರ ತುಂಬಿ ಕೊಡಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ.
ತೆರಿಗೆ ಹಂಚಿಕೆ ಸೇರಿದಂತೆ ಒಟ್ಟು ಸಂಪನ್ಮೂಲ ಹಂಚಿಕೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ರಾಜ್ಯ ಸರ್ಕಾರ ವರ್ಷಗಳಿಂದ ಆರೋಪಿಸುತ್ತಿದೆ. ಕರ್ನಾಟಕದಿಂದ ಸಂಗ್ರಹವಾಗುವ ಒಂದು ರೂಪಾಯಿ ತೆರಿಗೆಯಲ್ಲಿ 15 ಪೈಸೆ ಮಾತ್ರ ವಾಪಸ್ ಬರುತ್ತಿದೆ ಎಂದು ದೂರಿದೆ. ಜಿಎಸ್‌ಟಿ ವ್ಯವಸ್ಥೆ ಸರಳೀಕರಣದಿಂದ ರಾಜ್ಯಕ್ಕೆ ಮತ್ತಷ್ಟು ಹೊಡೆತ ಬೀಳಲಿದೆ ಎಂದು ರಾಜ್ಯ ಸರ್ಕಾರ ಬಲವಾಗಿ ಪ್ರತಿಪಾದಿಸಿದೆ. ಹೀಗಾಗಿ, ರಾಜ್ಯ ಸರ್ಕಾರ ಮುಂಚೂಣಿಯಲ್ಲಿ ನಿಂತು ಸಮಾನ ಮನಸ್ಕರ ರಾಜ್ಯಗಳನ್ನು ಒಗ್ಗೂಡಿಸಿ ಕೇಂದ್ರದ ವಿರುದ್ಧ ಧ್ವನಿ ಎತ್ತಲು ಅಣಿಯಾಗಿದೆ.
ಶೇ 20ರಷ್ಟು ಆದಾಯ ನಷ್ಟ:
‘ಕೇಂದ್ರದ ಆದಾಯದಲ್ಲಿ ಜಿಎಸ್‌ಟಿ ಪಾಲು ಶೇ 28ರಷ್ಟು ಮಾತ್ರ. ಉಳಿದ ಶೇ 72ರಷ್ಟು ಆದಾಯವನ್ನು ವಿವಿಧ ಮೂಲಗಳಿಂದ ಗಳಿಸುತ್ತದೆ. ನೇರ ತೆರಿಗೆ, ಆದಾಯ ತೆರಿಗೆ, ಕಸ್ಟಮ್ಸ್, ಡಿವಿಡೆಂಟ್ ಹಾಗೂ ವಿವಿಧ ಸೆಸ್‌ಗಳು ಕೇಂದ್ರದ ಆದಾಯದ ಮೂಲ. ಸೆಸ್ ಮೂಲಕವೇ ಕೇಂದ್ರ ಸರ್ಕಾರ ಶೇ 17ರಿಂದ ಶೇ 20ರಷ್ಟು ಆದಾಯ ಗಳಿಸುತ್ತದೆ. ಸೆಸ್ ಆದಾಯದಲ್ಲಿ ಒಂದು ರೂಪಾಯಿಯನ್ನೂ ಕೇಂದ್ರ ಸರ್ಕಾರವು ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಆದರೆ, ರಾಜ್ಯಗಳ ಆದಾಯದಲ್ಲಿ ಜಿಎಸ್‌ಟಿ ಪಾಲು ಶೇ 50ರಷ್ಟು. ಹೀಗಾಗಿ ಅಭಿವೃದ್ಧಿಗಾಗಿ ಹಾಗೂ ಆದಾಯ ಸಂಗ್ರಹಣೆಗೆ ರಾಜ್ಯಗಳು ಜಿಎಸ್‌ಟಿಯನ್ನೇ ನೆಚ್ಚಿಕೊಂಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯಗಳ ಆದಾಯದಲ್ಲಿ ಶೇ 20ರಷ್ಟು ನಷ್ಟವಾದರೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಹೊಡೆತ ಬೀಳುತ್ತದೆʼ ಎಂದು ಕರ್ನಾಟಕ ಕಳವಳ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.