ADVERTISEMENT

ಗುಬ್ಬಿ ಪಟ್ಟಣದಲ್ಲಿ ಅಕ್ರಮ ಮಸೀದಿ ನಿರ್ಮಾಣ ಆರೋಪ: ಕ್ರಮಕ್ಕೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 15:40 IST
Last Updated 10 ಅಕ್ಟೋಬರ್ 2025, 15:40 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ಬಡಾವಣೆಯ ಮಧ್ಯದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಆಕ್ಷೇಪಣೆಗೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆ ನಡೆಸಿ ನಿಯಮ ಉಲ್ಲಂಘನೆಯಾಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಮಸೀದಿಯನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಆಕ್ಷೇಪಿಸಿ ಗುಬ್ಬಿ ಪಟ್ಟಣದ ನಿವಾಸಿಗಳಾದ ಬಿ.ಲೋಕೇಶ್‌ ಸೇರಿದಂತೆ ಒಟ್ಟು 12 ಜನ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ನಿಯಮ ಉಲ್ಲಂಘಿಸಿದ್ದರೆ ಕ್ರಮ ಕೈಗೊಳ್ಳಿ’ ಎಂದು ಪ್ರತಿವಾದಿಯಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸ್ಥಳೀಯ ಆಡಳಿತಕ್ಕೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿದೆ.

ADVERTISEMENT

ಅರ್ಜಿಯಲ್ಲಿ ಏನಿತ್ತು?:

‘ನಾವು ಆದಿ ದ್ರಾವಿಡ ಸಮುದಾಯಕ್ಕೆ ಸೇರಿದವರಾಗಿದ್ದು ಗುಬ್ಬಿ ಪಟ್ಟಣದ ಬಂಗೋಲ್‌ಪಾಳ್ಯದಲ್ಲಿ ಸರ್ಕಾರ ನಮಗೆ 2 ಎಕರೆ ಕೊಡಮಾಡಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಆದಿ ದ್ರಾವಿಡ ಸಮುದಾಯದ ಜನರು 1968 ರಿಂದಲೂ ವಾಸ ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಈಗ ಅನುಮತಿ ಇಲ್ಲದೆ ಜಾಮಿಯಾ ಮಸೀದಿ ಸಮಿತಿ ವತಿಯಿಂದ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದ್ದು ಇದನ್ನು ತಡೆಯಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.