ADVERTISEMENT

ಅತಿಥಿ ಉಪನ್ಯಾಸಕರ ಪಾದಯಾತ್ರೆ: ಬೆಂಗಳೂರು ಪ್ರವೇಶಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 15:42 IST
Last Updated 3 ಜನವರಿ 2024, 15:42 IST
ಬೆಂಗಳೂರು ಪ್ರವೇಶಿಸುತ್ತಿದ್ದ ಅತಿಥಿ ಉಪನ್ಯಾಸಕರ ಪಾದಯಾತ್ರೆಯನ್ನು ಪೊಲೀಸರು ತಡೆದರು.
ಬೆಂಗಳೂರು ಪ್ರವೇಶಿಸುತ್ತಿದ್ದ ಅತಿಥಿ ಉಪನ್ಯಾಸಕರ ಪಾದಯಾತ್ರೆಯನ್ನು ಪೊಲೀಸರು ತಡೆದರು.   

ಬೆಂಗಳೂರು: ಸೇವಾಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ತುಮಕೂರಿನಿಂದ ಆರಂಭಿಸಿದ್ದ ಪಾದಯಾತ್ರೆಯನ್ನು ಬೆಂಗಳೂರು ಪ್ರವೇಶಕ್ಕೂ ಮೊದಲೇ ತಡೆದ ಪೊಲೀಸರು, ಎಲ್ಲರನ್ನೂ ವಶಕ್ಕೆ ಪಡೆದರು.

ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಎಲ್ಲ ಅತಿಥಿ ಉಪನ್ಯಾಸಕರನ್ನೂ ಬಸ್‌ಗಳಲ್ಲಿ ಕರೆತಂದು ಸ್ವಾತಂತ್ರ್ಯ ಉದ್ಯಾನದ ಬಳಿ ಇಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಘಟನೆಯ ಐವರು ಮುಖಂಡರನ್ನು ಸಂಜೆ ಮಾತುಕತೆಗೆ ಆಹ್ವಾನಿಸಿದ್ದರು. ಆದರೆ, ಕೊನೆಗಳಿಗೆಯಲ್ಲಿ ಸಭೆ ಮುಂದೂಡಲಾಯಿತು ಎಂದು ಅತಿಥಿ ಉಪನ್ಯಾಸಕ ರಾಘವೇಂದ್ರ ಮಾಹಿತಿ ನೀಡಿದರು. 

ಅತಿಥಿ ಉಪನ್ಯಾಸಕರು ಸೇವಾಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.23ರಿಂದ ಮುಷ್ಕರ ನಡೆಸುತ್ತಿದ್ದಾರೆ. ಈ ಮಧ್ಯೆ ಸರ್ಕಾರ ₹5 ಸಾವಿರಕ್ಕೆ ಗೌರವಧನ ಹೆಚ್ಚಳ, ಕನಿಷ್ಠ 10 ವರ್ಷ ಸೇವೆ ಸಲ್ಲಿಸಿ, 60 ವರ್ಷಕ್ಕೆ ನಿವೃತ್ತರಾಗುವವರಿಗೆ ₹5 ಲಕ್ಷ ಧನಸಹಾಯ, ಆರೋಗ್ಯವಿಮೆ ಹಾಗೂ ಪ್ರತಿ ತಿಂಗಳು ಒಂದು ರಜೆ ನೀಡುವ ಘೋಷಣೆ ಮಾಡಿತ್ತು.

ADVERTISEMENT

ಉನ್ನತ ಶಿಕ್ಷಣ ಸಚಿವರು ಘೋಷಿಸಿದ ಭರವಸೆಗಳನ್ನು ತಿರಸ್ಕರಿಸಿ, ಜ.1ರಿಂದ ಪಾದಯಾತ್ರೆ ಆರಂಭಿಸಿದ್ದರು. ಮೂರನೇ ದಿನ ನೆಲಮಂಗಲದಿಂದ ಹೊರಟ ಪಾದಯಾತ್ರೆ ಬೆಂಗಳೂರು ಪ್ರವೇಶಿಸಬೇಕಿತ್ತು. ನಾಗಸಂದ್ರದ ಬಳಿ ಅವರನ್ನು ತಡೆಯಲಾಯಿತು.

ಧರಣಿ ಮುಂದುವರಿಕೆ: 

ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಆರಂಭಿಸಲಿದ್ದು, ಬೇಡಿಕೆ ಈಡೇರುವರೆಗೂ ಮುಂದುವರಿಸಲಾಗುವುದು. ಸೇವಾಭದ್ರತೆ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಅತಿಥಿ ಉಪನ್ಯಾಸಕರ ಸಂಘದ ಮುಖಂಡರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.