ADVERTISEMENT

ಕಣ್ಣಿಗೆ ಪೆಟ್ರೋಲ್: ಗುಣಮುಖರಾದ ಗೂಳಿಹಟ್ಟಿ ಶೇಖರ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 11:37 IST
Last Updated 7 ಜನವರಿ 2019, 11:37 IST
ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರ ಆರೋಗ್ಯವನ್ನು ಶಾಸಕ ಕೆ.ಎಸ್. ಈಶ್ವರಪ್ಪ ವಿಚಾರಿಸಿದರು.
ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರ ಆರೋಗ್ಯವನ್ನು ಶಾಸಕ ಕೆ.ಎಸ್. ಈಶ್ವರಪ್ಪ ವಿಚಾರಿಸಿದರು.   

ಶಿವಮೊಗ್ಗ:ಮರಳು ವಿಚಾರವಾಗಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಮೈಮೇಲೆ ಸುರಿದುಕೊಂಡ ಪೆಟ್ರೋಲ್‌ನಿಂದ ಕಣ್ಣು ಉರಿಗೆ ಒಳಗಾಗಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ಶಂಕರ್ ಕಣ್ಣಿನ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ 1.15ಕ್ಕೆ ಚಿಕಿತ್ಸೆಗೆ ಬಂದಿದ್ದರು. ಕಣ್ಣಿನ ಒಳಭಾಗ ಸ್ವಚ್ಛಗೊಳಿಸಲಾಗಿದೆ. ಕಾರ್ನಿಯಾ ಪರೀಕ್ಷಿಸಲಾಗಿದೆ. ಎಲ್ಲ ಪರೀಕ್ಷೆಗಳ ನಂತರ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಯಾವುದೇ ಅಪಾಯ ಇಲ್ಲ. ಸೋಮವಾರ ಮಧ್ಯಾಹ್ನ 3.30ಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರಾದ ಡಾ.ಮಹೇಶ್ ಮಾಹಿತಿ ನೀಡಿದರು.

ಆವೇಶದಲ್ಲಿ ಸುರಿದುಕೊಂಡೆ:

ADVERTISEMENT

ಬಡವರು ಮನೆಕಟ್ಟಿಕೊಳ್ಳಲು, ದೇವಸ್ಥಾನ ನಿರ್ಮಿಸಲು, ಸಣ್ಣಪುಟ್ಟ ಕೆಲಸಗಳಿಗೂ ಮರಳು ಸಿಗುತ್ತಿಲ್ಲ. ಅಕ್ರಮ ಮರಳು ಸಾಗಣೆಗೆ ಪೊಲೀಸರೇ ಸಾಥ್ ನೀಡುತ್ತಿದ್ದಾರೆ. ಒಂದು ಲೋಡ್ ಮರಳಿಗೆ ₨ 25 ಸಾವಿರ ವಸೂಲಿ ಮಾಡುತ್ತಾರೆ. ಇದನ್ನು ವಿರೋಧಿಸಿ ಹೊಸದುರ್ಗಠಾಣೆ ಮುಂದೆ ಪ್ರತಿಭಟನೆ ನಡೆಸುವಾಗ ಆವೇಶಕ್ಕೆ ಒಳಗಾಗಿ ಪೆಟ್ರೋಲ್ ಸುರಿದುಕೊಂಡೆ. ಸಹಿಸಲು ಸಾಧ್ಯವಾಗದಷ್ಟು ಕಣ್ಣು ಉರಿ. ಇಲ್ಲಿನ ವೈದ್ಯರ ಆರೈಕೆ ಬಳಿಕ ಸಹಜ ಸ್ಥಿತಿಗೆ ತಲುಪುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಪ್ರತಿಕ್ರಿಯೆ ನೀಡಿದರು.

ಆಸ್ಪತ್ರೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ, ಶೇಖರ್ ಆರೋಗ್ಯ ವಿಚಾರಿಸಿದರು.

ಪ್ರಕರಣ ವಾಪಸ್‌ ಪಡೆಯಲು ಆಗ್ರಹ:

ಮರಳು ಸಾಗಣೆ ವಿಚಾರದಲ್ಲಿ ಹೊಸದುರ್ಗ ಠಾಣೆಯಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನೂ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಹೊಸದುರ್ಗಕ್ಕೆ ತೆರಳಿ ಹೋರಾಟ ಹಮ್ಮಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಎಚ್ಚರಿಸಿದರು.

ರಾಜ್ಯದ ಉದ್ದಗಲಕ್ಕೂ ಮರಳಿನ ಸಮಸ್ಯೆ ಇದೆ. ಮರಳು ದಂಧೆಯಲ್ಲಿ ಕಾಂಗ್ರೆಸ್ ಮುಖಂಡರು ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯ ಜನರ ಜೀವನದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.