ADVERTISEMENT

25 ವರ್ಷದ ಹಿಂದಿನ ದೇವೇಗೌಡರು ಕಳೆದು ಹೋಗಿದ್ದಾರೆ, ಹುಡುಕಿಕೊಡಿ– ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2024, 13:28 IST
Last Updated 8 ಜನವರಿ 2024, 13:28 IST
   

ಬೆಂಗಳೂರು: ‘ಆರ್‌ಎಸ್‌ಎಸ್, ವಿಎಚ್‌ಪಿ, ಬಜರಂಗದಳ ಮತ್ತು ಶಿವಸೇನೆಯಂಥ ಕೋಮು ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು 25 ವರ್ಷಗಳ ಹಿಂದೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಗುಜರಾತ್‌ನ ಬರೋಡದಲ್ಲಿ ಆಗ್ರಹಿಸಿದ ಸುದ್ದಿ ಈಗ ಮುನ್ನೆಲೆಗೆ ಬಂದಿದೆ.

‘ದಕ್ಷಿಣ ಗುಜರಾತ್‌ನಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಗೆ ಈ ಸಂಘಟನೆಗಳು ಕಾರಣ. ಈ ಸಂಘಟನೆಗಳು ರಾಷ್ಟ್ರದ ಹಲವು ಭಾಗಗಳಲ್ಲಿ ಧರ್ಮಾಂಧತೆಯನ್ನು ಹಬ್ಬಿಸುತ್ತಿವೆ. ಅವುಗಳ ಚಟುವಟಿಕೆಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಮೋದ್ ಮಹಾಜನ್ ಬೆಂಬಲ ನೀಡುತ್ತಿದ್ದಾರೆ’ ಎಂದು ದೇವೇಗೌಡರು ಆಪಾದಿಸಿದ್ದರು.

ಪ್ರಜಾವಾಣಿಯಲ್ಲಿ ಪ್ರಕಟವಾದ ‘25 ವರ್ಷಗಳ ಹಿಂದೆ’ ಅಂಕಣವನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, ‘ದೇವೇಗೌಡರು ಕಳೆದು ಹೋಗಿದ್ದಾರೆ, ಹುಡುಕಿಕೊಡಿ’ ಎಂದು ಲೇವಡಿ ಮಾಡಿದೆ.

ADVERTISEMENT

25 ವರ್ಷಗಳ ಹಿಂದೆ ಕೋಮು ಶಕ್ತಿಗಳ ವಿರುದ್ಧ ತೊಡೆ ತಟ್ಟಿದ್ದ ಅಂದಿನ ದೇವೇಗೌಡರು ಈಗ ಕಳೆದುಹೋಗಿದ್ದಾರೆ. ಆರ್‌ಎಸ್ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳದಂತಹ ವಿಧ್ವಂಸಕ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದು ದೇವೇಗೌಡರಿಗೆ ನೆನಪಿದೆಯೇ?ಈಗ ಅದೇ ವಿಚ್ಛಿದ್ರಕಾರಿ ಸಂಘಟನೆಗಳೊಂದಿಗೆ ಕೈಜೋಡಿಸಿದ್ದು ದೇವೇಗೌಡರ ದುರಂತವೋ, ಅವರನ್ನು ಸೆಕ್ಯುಲರ್ ಎಂದು ನಂಬಿದ್ದವರ ದುರಂತವೋ ತಿಳಿಯದು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.