ADVERTISEMENT

ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 19:00 IST
Last Updated 9 ಏಪ್ರಿಲ್ 2019, 19:00 IST
   

ಬೆಂಗಳೂರು: ಗುತ್ತಿಗೆದಾರರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಖಂಡಿಸಿ ಐ.ಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ಮುಖಂಡರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ‘ಆದಾಯ ತೆರಿಗೆ ಇಲಾಖೆ ಈ ಸಂಬಂಧ ಆಯೋಗಕ್ಕೆ ದೂರು ನೀಡಿದೆ. ಮುಖ್ಯಮಂತ್ರಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಇದೆ ಎಂದರು.

ಐದು ಪುಟಗಳ ಪತ್ರ: ಮುಖ್ಯಮಂತ್ರಿ ಸಂಪುಟ ಸಚಿವರ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಕಮಿಷನರ್‌ ಬಿ.ಆರ್‌. ಬಾಲಕೃಷ್ಣನ್‌ ಆಯೋಗಕ್ಕೆ ಐದು ಪುಟಗಳ ಪತ್ರ ಬರೆದಿದ್ದಾರೆ. ಚುನಾವಣೆಯಲ್ಲಿ ಅಕ್ರಮ ಹಣ ಬಳಕೆ ಆಗುವುದನ್ನು ತಡೆಯುವ ಉದ್ದೇಶದಿಂದ ರಾಜ್ಯದ ಹಲವೆಡೆ ಗುತ್ತಿಗೆದಾರರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದಿದ್ದಾರೆ.

ADVERTISEMENT

ಐ.ಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಕುಮಾರಸ್ವಾಮಿ, ಸಂಪುಟ ಸಚಿವರು ಮತ್ತು ಕಾಂಗ್ರೆಸ್‌ ನಾಯಕರು ತಮ್ಮ ಪಕ್ಷಗಳ ಕಾರ್ಯಕರ್ತರನ್ನು ಪ್ರಚೋದಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ, ಮೊದಲೇ ದಾಳಿ ರಹಸ್ಯವನ್ನು ಮಾಧ್ಯಮಗಳಿಗೆ ಬಯಲು ಮಾಡುವ ಮೂಲಕ ‘ಗೋಪ್ಯತೆ ಪ್ರಮಾಣ ವಚನ’ ಸ್ವೀಕರಿಸಿದ್ದನ್ನು ಉಲ್ಲಂಘಿಸಿದ್ದಾರೆ ಎಂದಿದ್ದಾರೆ.

ಈ ಕುರಿತು ಹೊರಗಿನ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದೂ ಬಾಲಕೃಷ್ಣನ್‌ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.