ADVERTISEMENT

ಅನರ್ಹ ಶಾಸಕರ ಎದೆ ಬಗೆದರೆ ಅಲ್ಲಿ ಕಾಣುವವರಾರು? ಹೇಳಿ ಸಿದ್ದರಾಮಯ್ಯ–ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 6:54 IST
Last Updated 25 ಅಕ್ಟೋಬರ್ 2019, 6:54 IST
ಸಿದ್ದರಾಮಯ್ಯ, ಕುಮಾರಸ್ವಾಮಿ
ಸಿದ್ದರಾಮಯ್ಯ, ಕುಮಾರಸ್ವಾಮಿ   

ಬೆಂಗಳೂರು:ಸರ್ಕಾರ ಬೀಳಿಸಿದ ಶಾಸಕರ ಎದೆ ಬಗೆದರೆ ಅಲ್ಲಿ ಕಾಣುತ್ತಿದ್ದವರು ಯಾರು? ಈ "ಯಾರು''ಎಂಬ ಪ್ರಶ್ನೆಗೆ ನೀವು ಪ್ರಾಮಾಣಿಕವಾಗಿ ಉತ್ತರಿಸುವಿರಾ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನು ಕೇಳಿದ್ದಾರೆ.

ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಬಳಿಕ ಬಿಜೆಪಿಗೆ ಹಿನ್ನಡೆ ಹಾಗೂ ಕಾಂಗ್ರೆಸ್‌ಗೆ ಚೇತರಿಕೆಯ ಫಲಿತಾಂಶ ಬಂದಿರುವುದರಿಂದ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹಾಗೂ ಜೆಡಿಎಸ್‌ ನಾಯಕ ಕುಮಾರಸ್ವಾಮಿ ನಡುವೆ ಜಟಾಪಟಿ ಶುರುವಾಗಿದೆ.

ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಫಲಿತಾಂಶದ ಬಳಿಕ ಸಿದ್ದರಾಮಯ್ಯ ಅವರುಉಪ ಚುನಾವಣೆಯಲ್ಲಿ ಕಾಂಗ್ರೆಸ್ 15ಸ್ಥಾನ ಗೆದ್ದರೆ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ನೀಡಬೇಕು. ನಂತರ ನಾವು ನೇರವಾಗಿ ಚುನಾವಣೆಗೆ ಹೋಗುತ್ತೇವೆ. ಜೆಡಿಎಸ್ ಜತೆ ಸೇರಲ್ಲ. ಅವರ ಜೊತೆ ಸೇರಿ ಅನುಭಿವಿಸಿದ್ದು ಸಾಕು ಎಂದು ಸಿದ್ಧರಾಮಯ್ಯ ಹೇಳಿದ್ದರು.ಇದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ 'ಸಿದ್ದರಾಮಯ್ಯನವರೇ ಯಾರ ಸಹವಾಸದಿಂದ ಯಾರು ಕೆಟ್ಟರು? ಯಾರು ಯಾರಿಗೆ ಕೇಡು ಬಗೆದರು? ಎಂದು ಆತ್ಮವಂಚನೆ ಇಲ್ಲದೇ ಹೇಳುವಿರಾ? ಎಂದಿದ್ದಾರೆ.

ನಮ್ಮ ಸಹವಾಸ ಮಾಡಿ ಎಂದು ಸಿದ್ದರಾಮಯ್ಯನವರನ್ನು ಬೇಡಿದ್ದು ಯಾರು, ಅವರ ಮನೆ ಬಾಗಿಲಿಗೆ ಹೋಗಿದ್ದು ಯಾರು? ಸಹಕಾರ(?) ಕೊಟ್ಟವರು ಯಾರು? ಪಕೃತಿ ಚಿಕಿತ್ಸೆಯಲ್ಲಿ ಕೂತು ಕತ್ತಿ ಮಸೆದಿದ್ದು ಯಾರು? ದಿನಕ್ಕೊಬ್ಬರ ಮೂಲಕ ನನ್ನನ್ನು ಟೀಕಿಸಿದ್ದು ಯಾರು? ಎಂದು ಪ್ರಶ್ನೆ ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರೇ ಸರ್ಕಾರವನ್ನು ಬಿಳಿಸಿದ್ದು ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಟ್ವೀಟ್‌ ಮೂಲಕ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನೀವು ಕೊಟ್ಟ ಸಹಕಾರ ಎಂಥದ್ದು? ಸರ್ಕಾರ ಬೀಳಿಸಿದ ಶಾಸಕರ ಎದೆ ಬಗೆದರೆ ಅಲ್ಲಿ ಕಾಣುತ್ತಿದ್ದವರು ಯಾರು? ಈ "ಯಾರು''ಎಂಬ ಪ್ರಶ್ನೆಗೆ ನೀವು ಪ್ರಾಮಾಣಿಕವಾಗಿ ಉತ್ತರಿಸುವಿರಾ? ನೀವು ಕೊಟ್ಟ ಸಹಕಾರಕ್ಕೆ, ಬೆಂಬಲಕ್ಕೆ ನಾನು ಋಣಿ. ಈ ಜನ್ಮದಲ್ಲಿ‌ ನಾನು ಮರೆಯಲಾರೆ. ನಿಮ್ಮ ಸಹವಾಸ ನಮಗೂ ಬೇಡ ಸಿದ್ದರಾಮಯ್ಯನವರೇ... ಎಂದು ಕುಮಾರಸ್ವಾಮಿ ಟ್ವೀಟ್‌ ಮೂಲಕ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.