ADVERTISEMENT

83 ತಾಲೂಕುಗಳ ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿʼ: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2021, 5:17 IST
Last Updated 29 ಡಿಸೆಂಬರ್ 2021, 5:17 IST
   

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಕೈಗೊಂಡಿರುವ ಹೋರಾಟ ಪಕ್ಷಾತೀತ. ಇದನ್ನು ಟೀಕೆ ಮಾಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷರು. ಅವರು ನನ್ನನ್ನೂ ಸೇರಿಸಿ 83 ತಾಲೂಕುಗಳ ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿʼಹಾಕಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.

ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಎಚ್.ಡಿ. ದೇವೇಗೌಡರು ಕೊಟ್ಟ ಕಾಣಿಕೆ ಅಗಣಿತ. ತಮ್ಮ ಜೀವಿತಾವಧಿಯನ್ನೇ ಈ ನೆಲಕ್ಕೆ ನೀರರಿಸಲು ಮುಡಿಪಿಟ್ಟ ಭಗೀರಥರು ಅವರು. ಮೇಕೆದಾಟು ಯೋಜನೆಯ ಮೂಲ ರೂವಾರಿಯೇ ಅವರನ್ನೇ ಮರೆತ ಕಾಂಗ್ರೆಸ್ ನಾಯಕರು ‘ಸತ್ಯಕ್ಕೆ ಸಮಾಧಿ’ಕಟ್ಟುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಅವರಿಗೆ ಸತ್ಯ ಹೇಳಲು ನಾಲಿಗೆ ಹೊರಳುತ್ತದೆ. ಆದರೆ; ಸತ್ಯಕ್ಕೆ ನಾಲಿಗೆ ಪ್ರಮೇಯವೇ ಇಲ್ಲ. ಸತ್ಯ ಸತ್ಯವೇ. ದೇವೇಗೌಡರು ಅಂತಹ ‘ಸತ್ಯದ ಸಾಕ್ಷಿ’.ನೀರಾವರಿಗಾಗಿ ಅವರು ಅವಿರತವಾಗಿ ಶ್ರಮಿಸಿ ನಡೆದಾಡಿದ ನೆಲದ ಮಣ್ಣಿನ ಮಕ್ಕಳ ನಂಬಿಕೆಯನ್ನೇ ʼಬುಲ್ಡೋಜ್ʼಮಾಡುವಂಥ ರಾಜಕಾರಣ ʼಕೈʼಪಕ್ಷ ಮಾಡುತ್ತಿದೆ.

ADVERTISEMENT

ಬೆಂಗಳೂರಿನ ನ್ಯಾಯಯುತ ಪಾಲು, ಕಾವೇರಿ 4ನೇ ಹಂತದ 9 ಟಿಎಂಸಿ ನೀರನ್ನು ತಮಿಳುನಾಡಿನ ಒತ್ತಡಕ್ಕೆ ಮಣಿದು ತಡೆದಿತ್ತು ಕಾಂಗ್ರೆಸ್. ಆಗ ಪಿ.ವಿ.ನರಸಿಂಹರಾವ್ ಪ್ರಧಾನಿ. ಕನ್ನಡಿಗರ ಕನಸುಗಳಿಗೆ ಕೊಳ್ಳಿ ಇಟ್ಟ ಅದೇ ಪಕ್ಷ ಈಗ ಸತ್ಯಗಳನ್ನು ಹೂತು ಮುಜುಗರವಿಲ್ಲದೆ ಮತಯಾತ್ರೆಗೆ ಹೊರಟಿದೆ ಎಂದು ಎಚ್‌ಡಿಕೆ ಟೀಕಿಸಿದ್ದಾರೆ.

ಆಗ ಸಿಎಂ ಆಗಿದ್ದ ಗೌಡರನ್ನು ತಡೆದ ಪಕ್ಷಕ್ಕೆ ಪ್ರಧಾನಿಯಾದ ಗೌಡರನ್ನು ತಡೆಯಲು ಧೈರ್ಯ ಸಾಲಲಿಲ್ಲ. ಕಾಂಗ್ರೆಸ್ ತಡೆಯಲ್ಪಟ್ಟಿದ್ದ 9 ಟಿಎಂಸಿ ನೀರು ರಾಜ್ಯಕ್ಕೆ ದಕ್ಕುವ ಯೋಜನೆಗೆ ಮಣ್ಣಿನ ಮಗ ಎದೆಗುಂದದೆ ಹಸಿರು ನಿಶಾನೆ ತೋರಿದ್ದರು. ಜಪಾನ್‌ನಿಂದ ಹಣವನ್ನೂ ತಂದರು ಎಂದಿದ್ದಾರೆ.

ಬೆಂಗಳೂರಿಗೆ ಕಾವೇರಿ ನೀರು ಕೊಟ್ಟವರು ದೇವೇಗೌಡರು. ಜೀವ ಜಲ ತಂದು ಬವಣೆ ನೀಗಿಸಿದವರು ಅವರೇ. ಈ ಭಗೀರಥನನ್ನೇ ಮರೆತ ಕಾಂಗ್ರೆಸ್ ' ಕೃತಘ್ನ ' ರಾಜಕಾರಣಕ್ಕೆ ಏನು ಹೇಳುವುದು? ಕಾಂಗ್ರೆಸ್'ನ 5 ವರ್ಷದ ಸರಕಾರವೇ ಇತ್ತು. ʼಸಿದ್ದಹಸ್ತರೇʼ ಸಿಎಂ ಆಗಿದ್ದರು. ಆಗ ಕೇಂದ್ರದ ಮುಂದೆ ಪ್ರತಾಪ ತೋರಬಹುದಿತ್ತು. ಬರೀ ಮಾತಿನ ಉತ್ತರ ಪೌರುಷ. ಆಗ ಗಾಂಧೀಜಿ ಪ್ರತಿಮೆ ಮುಂದೆ ಉಪವಾಸ ಕೂತ ಮಣ್ಣಿನಮಗನ ಖದರಿಗೆ ಕೇಂದ್ರವೇ ನಡುಗಿತ್ತು. ದಿಲ್ಲಿಯಿಂದ ಮಂತ್ರಿಗಳು ಓಡಿಬಂದರು. ಅದೆಲ್ಲವನ್ನೂ ಕಾಂಗ್ರೆಸ್ ಮರೆತಿದೆಯಾ? ಎಂಟು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಹೌದು. ಜಾಣ ಮರೆವು ಕೂಡ ಒಂದು ರೋಗ. ಮಲತಾಯಿ ಧೋರಣೆಯೇ ಮೈವೆತ್ತ ಕಾಂಗ್ರೆಸ್ ಈಗ ಪವಿತ್ರ ಗಂಗೆಯನ್ನೂ ಮತಕ್ಕೆ ಬಳಸುತ್ತಿದೆ. ಆಗ ಏನೂ ಮಾಡದ ʼಉತ್ತರಕುಮಾರ ಸಿದ್ದಸೂತ್ರಧಾರʼ, ಈಗೇನು ಮಾಡಲು ಸಾಧ್ಯ? ಆದರೆ; ರಾಜ್ಯದ ಹಿತದ ಪ್ರಶ್ನೆ ಬಂದಾಗ ಗೌಡರು ರಾಜಿಯಾದವರಲ್ಲ. ಅವರೊಬ್ಬರಿಂದಲೇ ಮೇಕೆದಾಟು ಯೋಜನೆ ಸಾಕಾರ ಸಾಧ್ಯ. ಇಲ್ಲಿ 30 ವರ್ಷ ಆಳಿದವರು ಕಾವೇರಿ-ಕೃಷ್ಣಾ ವಿಚಾರದಲ್ಲಿ ಕೊಟ್ಟ ಕೊಡುಗೆ ಏನು? ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಸ್ಲೋಗನ್ ಹೇಳಿಕೊಂಡು ಹೋಗಿ ಉತ್ತರ ಕರ್ನಾಟಕಕ್ಕೆ ಟೋಪಿ ಹಾಕಿದ್ದಾಗಿದೆ. ಮೇಕೆದಾಟು ವಿಚಾರದಲ್ಲಿಯೂ ಅದೇ ಆಗಲಿದೆ ಎಂದಿದ್ದಾರೆ.

ದೇವೇಗೌಡರು ಕೃಷ್ಣೆ, ಕಾವೇರಿ ಕೊಳ್ಳದಲ್ಲಿ ಮಾಡಿದ ಸಾಧನೆಗಳನ್ನು ತಿಳಿಯಲು ಇತಿಹಾಸದ ಪುಟಗಳನ್ನು ತೆರೆದು ನೋಡಬೇಕು. ಈಗ ಬೇಕಿರುವುದು ತಾಂತ್ರಿಕವಾಗಿ ಮೇಕೆದಾಟು ಯೋಜನೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗೆ ಒಪ್ಪಿಗೆ ಪಡೆಯಲು ಹೋರಾಟ ನಡೆಸಬೇಕು. ಅದು ಬಿಟ್ಟು ಹೊಸ ಸ್ಲೋಗನ್ ಅಗತ್ಯ ಇಲ್ಲ.

ಪಾಪ ತೊಳೆಯುವ ತಾಯಿ ʼಲೋಕಪಾವನಿʼ ಈಗ ವೋಟಿನ ದಾಳವಾಗುತ್ತಿರುವುದು ನಾಡಿನ ದುರ್ದೈವ. ನೀರಿನ ಮುಂದೆ ʼಕಪಟ ನಾಟಕʼ ಮಾಡುವ ಸಿದ್ದಹಸ್ತ, ಡಿಸೈನ್ ಶೂರರಿಗೆ ಮುಂದೆ ಕಾದಿದೆ ಶಾಸ್ತಿ. ಭೂತಾಯಿ ಒಡಲಿನ ಮಣ್ಣು ಬಗೆದ, ಕಲ್ಲುಬಂಡೆಗಳನ್ನೇ ನುಂಗಿದ ‘ರಕ್ಕಸ ರಾಜಕಾರಣʼದ ಕಾಕದೃಷ್ಟಿ ಈಗ ತಾಯಿ ಕಾವೇರಿ ಮೇಲೂ ಬಿದ್ದಿದೆ.

ನಿಮ್ಮ ʼಬ್ರೂಟಸ್ʼ ಬುದ್ಧಿ, ಸರಕಾರವನ್ನೇ ಸ್ವಾಹ ಮಾಡಿದ ‘ಸಿದ್ಧಕಲೆʼಯ ಬಗ್ಗೆ 2018ರಲ್ಲೇ ನನಗೆ ಅರಿವಾಯಿತು. ‘ಕೈ’ ಚಿಹ್ನೆ ಇಟ್ಟುಕೊಂಡು ಕಂಡೋರ ಮೇಲೆ ‘ಕೈʼ ಇಡುವ ಭಸ್ಮಾಸುರ ರಾಜಕಾರಣದ ಅನುಭವ ನನಗೂ, ದೇವೇಗೌಡರಿಗೂ ಆಗಿದೆ. ಈ ಪಾದಯಾತ್ರೆಯಿಂದ ಜನರಿಗೇನು ಸಂದೇಶ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.