ADVERTISEMENT

ಸರ್ಕಾರವೇ ಪಠ್ಯಪುಸ್ತಕ ಗೊಂದಲ ಬಗೆಹರಿಸಬೇಕು: ಎಚ್‌.ಡಿ.ಕುಮಾರಸ್ವಾಮಿ ಒತ್ತಾಯ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 12:55 IST
Last Updated 6 ಜೂನ್ 2022, 12:55 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಕಲಬುರಗಿ: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಹಲವು ಪ್ರಮುಖರ ಪಾಠಗಳನ್ನು ಕೈಬಿಟ್ಟು, ಕೆಲವರ ಬಗೆಗಿನ ಮಾಹಿತಿಯನ್ನು ತಿರುಚುವ ಮೂಲಕ ಸರ್ಕಾರ ಗೊಂದಲ ಮಾಡಿಕೊಂಡಿದೆ. ಈ ಗೊಂದಲವನ್ನು ಸರ್ಕಾರವೇ ಬಗೆಹರಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಠ್ಯಪುಸ್ತಕ ಸಮಿತಿಯನ್ನು ಸರ್ಕಾರ ವಿಸರ್ಜಿಸಿದೆ. ಆದರೆ, ಅದು ರೂಪಿಸಿದ ಪಠ್ಯವನ್ನು ಉಳಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಆದ್ದರಿಂದ ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದರು.

ಹೊರಟ್ಟಿ ಏನು ಮಾಡಿದ್ದಾರೆ? ಇತ್ತೀಚೆಗೆ ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿ ಮತ್ತೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಅವರು ಶಿಕ್ಷಕರ ಕ್ಷೇತ್ರರವನ್ನು 40 ವರ್ಷ ಪ್ರತಿನಿಧಿಸಿದ್ದರಲ್ಲ, ಆಗ ಏನು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ADVERTISEMENT

‘ನಾನು ಮುಖ್ಯಮಂತ್ರಿ ಆಗಿದ್ದಾಗ ಎಷ್ಟು ಕಾಲೇಜುಗಳಿವೆ ಎಂಬ ಮಾಹಿತಿ ಹೊರಟ್ಟಿ ಅವರ ಬಳಿ ಇರಲಿಲ್ಲ. ಕಪ್ ಗೆಲ್ಲಲು ಅನೇಕರು ಹೋರಾಟ ಮಾಡುತ್ತಾರೆ. ಆದರೆ ನಾಯಕ ಕಪ್ ಹಿಡಿಯುವುದು ಪದ್ಧತಿ. ಆದರೆ, ನಾನೇ ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಮಾಡಿದ್ದೇನೆ. ಅವರು ಏನೂ ಮಾಡಿಲ್ಲ. ನಮ್ಮಿಂದ ಎಲ್ಲಾ ಪಡೆದು ಹೋದ ಮೇಲೆ ಮಾತಾಡುತ್ತಾರೆ. ಅವರ ಗೆಲುವಿಗೆ ಯಾವ ರೀತಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ’ ಎಂದು ವ್ಯಂಗ್ಯವಾಡಿದರು.

‘ಜೆಡಿಎಸ್ ಪಕ್ಷವನ್ನು ಅಷ್ಟು ಸುಲಭವಾಗಿ ಯಾರೂ ನಾಶ ಮಾಡಲು ಆಗುವುದಿಲ್ಲ. ಕಾರ್ಯಕರ್ತರ ಹೋರಾಟದ ಮೇಲೆ ಜೆಡಿಎಸ್ ನಿಂತುಕೊಂಡಿದೆ. ರಾಜ್ಯ ಸಭೆ ಚುನಾವಣೆ ನಂತರ ಮತದಾನದ ಬಗ್ಗೆ ಚರ್ಚೆ ಮಾಡುತ್ತೇನೆ. ಮೂರೂ ಪಕ್ಷಗಳು ತಮ್ಮದೇ ಆದ ಲೆಕ್ಕಾಚಾರ ಮಾಡಿಕೊಂಡಿವೆ. ಅಡ್ಡ ಮತದಾನಕ್ಕಿಂತ ಗಣಿತ ಲೆಕ್ಕಾಚಾರ ವರ್ಕ್ ಆಗುತ್ತದೆ’ ಎಂದರು.

‘ಚಡ್ಡಿ ರಾಜಕಾರಣ ನನಗೆ ಬೇಡ. ಅವರವರೇ ಚಡ್ಡಿ ಬಿಚ್ಚಿಕೊಳ್ಳುತ್ತಾರೆ. ಬಿಚ್ಚಿಕೊಳ್ಳಲಿ. ಆದರೆ ಜನರ ಚಡ್ಡಿ ಬಿಚ್ಚುವುದು ಬೇಡ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.