ADVERTISEMENT

ತುಮಕೂರಲ್ಲಿ ತಾಯಿ ಮಕ್ಕಳ ಸಾವು: ಸುಧಾಕರ್ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 20:54 IST
Last Updated 3 ನವೆಂಬರ್ 2022, 20:54 IST
   

ಬೆಂಗಳೂರು: ತುಮಕೂರಿನಲ್ಲಿ ಬಾಣಂತಿ ಹಾಗೂ ಅವಳಿ ಶಿಶುಗಳು ಮೃತಪಟ್ಟಿರುವ ದುರಂತದ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ರಾಜೀನಾಮೆ ನೀಡಬೇಕು, ರಾಜೀನಾಮೆ ಕೊಡದಿದ್ದರೆ ಮುಖ್ಯಮಂತ್ರಿಯೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

‘ಮಂಡ್ಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವನ್ನು ತಮ್ಮ ದ್ವಿಚಕ್ರವಾಹನದಲ್ಲಿ ಕರೆದೊಯ್ಯುತ್ತಿದ್ದ ದಂಪತಿಯನ್ನು ತಡೆದಿದ್ದ ಪೊಲೀಸರು, ದುಡ್ಡಿಗಾಗಿ ಕಿರುಕುಳ ನೀಡಿದ ಅಮಾನವೀಯ ಘಟನೆ ಗುರುವಾರ ನಡೆದಿತ್ತು. ಅದಾದ ಕೆಲವೇ ಹೊತ್ತಿಗೆ ತುಮಕೂರಿನಲ್ಲಿ ಕರುಳು ಹಿಂಡುವಂತಹ ರಾಜ್ಯವೇ ತಲೆ ತಗ್ಗಿಸುವ ಘಟನೆ ನಡೆದಿದೆ’ ಎಂದಿದ್ದಾರೆ.

‘ಸ್ವತಃ ವೈದ್ಯರೆಂದು ಹೇಳಿಕೊಳ್ಳುವ ಸಚಿವ ಸುಧಾಕರ್ ಉಸ್ತುವಾರಿಯಲ್ಲಿ ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ಹಳ್ಳಹಿಡಿದಿದೆ ಎನ್ನುವುದಕ್ಕೆ ಈ ಸಾವುಗಳೇ ಸಾಕ್ಷಿ. ಮಾನವೀಯತೆ ಇಲ್ಲದ ವೈದ್ಯೆ ಹಾಗೂ ಸರ್ಕಾರವೇ ಮಾಡಿದ ಕೊಲೆಗಳಿವು. ತಬ್ಬಲಿಯಾದ ಮಗುವಿನ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.