ADVERTISEMENT

ಕೆಎಂಎಫ್‌ ಮುಟ್ಟಿದರೆ ಬಿಜೆಪಿ ಭಸ್ಮ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 20:00 IST
Last Updated 1 ಜನವರಿ 2023, 20:00 IST
   

ಬೆಂಗಳೂರು: ‘ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಸಮಸ್ತ ಕನ್ನಡಿಗರ ಆಸ್ತಿ ಮತ್ತು ಅಸ್ಮಿತೆ. ನಂದಿನಿ ಬ್ರ್ಯಾಂಡ್‌ ಕನ್ನಡಿಗರ ಜೀವನಾಡಿ. ಅದನ್ನು ಮುಟ್ಟಿದರೆ ಬಿಜೆಪಿ ಭಸ್ಮವಾಗಲಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕೆಎಂಎಫ್‌ ಮತ್ತು ಗುಜರಾತ್‌ನ ಅಮುಲ್‌ ಸಂಸ್ಥೆಗಳನ್ನು ಒಂದುಗೂಡಿಸಬೇಕು ಎಂಬ ಕೇಂದ್ರ ಸಚಿವ ಅಮಿತ್‌ ಶಾ ನೀಡಿದ್ದ ಹೇಳಿಕೆಗೆ ಟ್ವಿಟರ್‌ನಲ್ಲಿ ಭಾನುವಾರ ಪ್ರತಿಕ್ರಿಯಿಸಿರುವ ಅವರು, ‘ಅಮುಲ್‌ ಜತೆ ಕೆಎಂಎಫ್‌ ವಿಲೀನ ಸಾಧ್ಯವಿಲ್ಲ. ನಮ್ಮ ರೈತರ ಅನ್ನ ಕಸಿಯುವ ಪ್ರಯತ್ನಗಳನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.

‘ನೆಲ, ಜಲ ಮತ್ತು ನುಡಿಯ ವಿಚಾರದಲ್ಲಿ ಕನ್ನಡ ಹಾಗೂ ಕರ್ನಾಟಕದ ಮೇಲೆ ನಿರಂತರ ಪ್ರಹಾರ ನಡೆಸುತ್ತಿರುವ ಬಿಜೆಪಿಯು ಕನ್ನಡಿಗರ ವಿರುದ್ಧದ ತನ್ನ ರಾಕ್ಷಸ ನೀತಿಗಳನ್ನು ಮುಂದುವರಿಸಿದೆ. ಈಗ ಕರ್ನಾಟಕದ ಹಾಲಿನಲ್ಲೂ ಗುಜರಾತಿನ ಹುಳಿ ಹಿಂಡಲು ಅಮಿತ್‌ ಶಾ ಹೊರಟಿದ್ದಾರೆ‘ ಎಂದು ಟೀಕಿಸಿದ್ದಾರೆ.

ADVERTISEMENT

‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕವನ್ನು ಉತ್ತರ ಭಾರತದ ಬ್ಯಾಂಕ್‌ಗಳ ಅಡಿಯಾಳು ಮಾಡಿ ಕನ್ನಡಿಗರ ಅನ್ನ ಕಸಿದುಕೊಳ್ಳಲಾಯಿತು. ಈಗ ನಂದಿನಿ ಬ್ರ್ಯಾಂಡ್‌ ಅನ್ನು ಕಸಿದುಕೊಂಡು ಹೋಗುವ
ರಹಸ್ಯ ಕಾರ್ಯಸೂಚಿ ರೂಪಿಸಿದಂತಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.