ADVERTISEMENT

ಬೆಂಕಿ ಹಾಕಿದವರ ಮನೆಗೆ ತೆರಳಿ ಸಾಂತ್ವನ: ಎಚ್‌.ವಿಶ್ವನಾಥ್ ಟೀಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 9:00 IST
Last Updated 14 ಆಗಸ್ಟ್ 2020, 9:00 IST
 ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್
ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್   

ಮೈಸೂರು: ‘‌ಸಿದ್ದರಾಮಯ್ಯ ಮತ್ತು ರಮೇಶ್‌ ಕುಮಾರ್‌ ಅವರಂತಹ ಕಾಂಗ್ರೆಸ್‌ ಮುಖಂಡರು ಸಿಎಎ ವಿರುದ್ಧದ ಪ್ರತಿಭಟನೆ ಸಮಯದಲ್ಲಿ ಮಾಡಿದ್ದ ಭಾಷಣದ ಬೆಂಕಿಯ ಉಂಡೆ ಈಗ ಬೆಂಗಳೂರಿನಲ್ಲಿ ಹೊತ್ತಿಕೊಂಡು ಉರಿಯುತ್ತಿದೆ’ ಎಂದು ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಟೀಕಿಸಿದರು.

‘ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿ, ಸಿಎಎ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಮಾಡಿದ ಭಾಷಣ, ಜನರಿಗೆ ಮಾಡಿರುವ ಪ್ರಚೋದನೆ ಇನ್ನೂ ಬಿಸಿ ಕೆಂಡವಾಗಿಯೇ ಇದೆ. ಅದನ್ನು ಆರಿಸುವ ಗೋಜಿಗೆ ಯಾರೂ ಹೋಗಿಲ್ಲ. ಆ ಕೆಂಡವನ್ನು ಹಿಡಿದು ಮತ್ತೆ ಮತ್ತೆ ರಾಜಕಾರಣ ಮಾಡುವ ಪ್ರಯತ್ನ ಕಾಂಗ್ರೆಸ್‌ನಿಂದ ನಡೆಯುತ್ತಿದೆ’ ಎಂದು ಆರೋಪಿಸಿದರು.

ಜಮೀರ್‌ ಖಾನ್‌ ಅವರಂತಹ ನಾಯಕರು ಗಲಭೆ ಮಾಡಿದವರ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ಬೆಂಕಿಯಿಂದ ಮನೆ ಕಳೆದುಕೊಂಡ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಯಾರೂ ಹೋಗುತ್ತಿಲ್ಲ. ಕಾಂಗ್ರೆಸ್‌ ಮಾಡಿದ ಪಾಪದ ಫಲದಿಂದಲೇ ಶಾಸಕರ ಮನೆ ಸುಟ್ಟಿದೆ ಎಂದರು.

ADVERTISEMENT

ಬೆಂಗಳೂರು ಗಲಭೆ ವಿಚಾರದಲ್ಲಿ ಕಾಂಗ್ರೆಸ್‌– ಎಸ್‌ಡಿಪಿಐ ನಡುವೆ ರಾಜಕೀಯ ನಡೆಯುತ್ತಿದೆ. ಆ ರಾಜಕಾರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.