ADVERTISEMENT

ಯುನೆಸ್ಕೊ ಮುಂದೆ ಕುರಿಗಾಹಿ ಬೇಡಿಕೆ ಮಂಡನೆ: ಎಚ್‌. ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 20:23 IST
Last Updated 8 ಜೂನ್ 2022, 20:23 IST
ಎಚ್‌. ವಿಶ್ವನಾಥ್‌
ಎಚ್‌. ವಿಶ್ವನಾಥ್‌   

ಬೆಂಗಳೂರು: ದೇಶದ ಕುರಿಗಾಹಿಗಳ ಸಮಸ್ಯೆಯನ್ನು ಯುನೆಸ್ಕೊ ಮುಂದೆ ಮಂಡಿಸುವುದಕ್ಕಾಗಿ 50 ಸದಸ್ಯರ ತಂಡದೊಂದಿಗೆ ಯುರೋಪ್‌ ಪ್ರವಾಸ ಕೈಗೊಳ್ಳಲಾಗುವುದು ಎಂದು ಶೆಫರ್ಡ್‌ ಇಂಡಿಯಾ ಇಂಟರ್‌ ನ್ಯಾಶನಲ್‌ ಸಂಘಟನೆಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುರಿ ಸಾಕಾಣಿಕೆಯಲ್ಲಿ ಭಾರತವು ಜಗತ್ತಿನಲ್ಲೇ 2ನೇ ಸ್ಥಾನದಲ್ಲಿದೆ. ಆದರೆ, ದೇಶದಲ್ಲಿ ಈ ವೃತ್ತಿ ಲಾಭದಾಯಕವಾಗಿ ಬೆಳೆದಿಲ್ಲ. ರೈತರು, ಕುರಿರೊಪ್ಪ ಮಾಲೀಕರು, ವಿದ್ವಾಂಸರು, ಎಂಜಿನಿಯರ್‌ಗಳು, ಉದ್ಯಮಿಗಳು, ಮಾಜಿ ಕುಲಪತಿಗಳು, ರಾಜಕಾರಣಿಗಳ ನಿಯೋಗವನ್ನು ಕೊಂಡೊಯ್ದು ಯುನೆಸ್ಕೊಗೆ ಮನವಿ ಸಲ್ಲಿಸಲಾಗುವುದು’ ಎಂದರು.

ಕುರಿಗಾಹಿಗಳ ಕುಲಕಸುಬು ಮತ್ತು ಸಂಸ್ಕೃತಿಯ ರಕ್ಷಣೆ, ಅವರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಯುನೆಸ್ಕೊಗೆ ಮನವಿ ಮಾಡಲಾಗುವುದು. ಯುರೋಪ್‌ನ ಕುರಿ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಆ ಕುರಿತು ಮಾಹಿತಿಯನ್ನು ರಾಜ್ಯದಲ್ಲಿ ಹಂಚಿಕೊಳ್ಳಲಾಗುವುದು ಎಂದರು.

ADVERTISEMENT

ಕುರಿ ಸಾಕಾಣಿಕೆಯನ್ನು ಲಾಭ ದಾಯಕ ವೃತ್ತಿಯನ್ನಾಗಿ ಪರಿವರ್ತಿಸಬಹುದು. ಕುರಿ ಹಾಲು ಟೆಟ್ರಾ ಪ್ಯಾಕ್‌ಗಳಲ್ಲಿ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್‌ಗೆ ₹300ರವರೆಗೂ ದರವಿದೆ. ಕುರಿ ಮಾಂಸಕ್ಕೂ ಹೆಚ್ಚು ಬೇಡಿಕೆ ಇದೆ. ಈ ಎಲ್ಲ ವಿಚಾರಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು ಎಂದರು.

*
ಪಠ್ಯಕ್ರಮದ ವಿಚಾರದಲ್ಲಿ ಆರ್‌ಎಸ್‌ಎಸ್‌ನವರನ್ನು ಒಪ್ಪಿಸುತ್ತೇನೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಒಪ್ಪಿಸಬೇಕಿರುವುದು ರಾಜ್ಯದ ಜನರು, ಶಿಕ್ಷಕರು, ವಿದ್ವಾಂಸರು, ಶಿಕ್ಷಣ ತಜ್ಞರನ್ನು
-ಎಚ್‌. ವಿಶ್ವನಾಥ್‌, ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.