ADVERTISEMENT

‘ಎಚ್‌1 ಎನ್‌1: ಉತ್ತರ ಕರ್ನಾಟಕದಲ್ಲಿ ಲ್ಯಾಬ್‌’

ಉಪ ಮುಖ್ಯಮಂತ್ರಿ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 19:41 IST
Last Updated 14 ಅಕ್ಟೋಬರ್ 2018, 19:41 IST
   

ಬೆಂಗಳೂರು: ಉತ್ತರ ಕರ್ನಾಟಕದ ಭಾಗಗಳಲ್ಲಿ ಎಚ್‌1ಎನ್‌1 ಪರೀಕ್ಷೆಗಾಗಿ ಲ್ಯಾಬ್‌ಗಳನ್ನು ತೆರೆಯುವುದಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಭಾನುವಾರ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

‘ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರ್ಗಿ ಭಾಗಗಳಲ್ಲಿ ಎಚ್‌1ಎನ್‌1 ಪರೀಕ್ಷೆಗಾಗಿ ಲ್ಯಾಬ್‌ಗಳು ಇಲ್ಲ. ಅಲ್ಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಲ್ಯಾಬ್‌ಗಳನ್ನು ತೆರೆಯಲು ಸರ್ಕಾರದ ವತಿಯಿಂದ ಸೂಚನೆ ನೀಡಲಿದ್ದೇನೆ. ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೂಡ ಲ್ಯಾಬ್‌ಗಳನ್ನು ಆರಂಭಿಸಲಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

ಭಯಪಡುವ ಅಗತ್ಯವಿಲ್ಲ: ‘ರಾಜ್ಯದಲ್ಲಿ ಎಚ್‌1ಎನ್‌1 ಪ್ರಕರಣಗಳು ಕಡಿಮೆಯಾಗಿವೆ. ಭಯಪಡುವ ಅಗತ್ಯವಿಲ್ಲ. ಹೋದ ವರ್ಷಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆ ಕೂಡ ಕಡಿಮೆ ಇದೆ. ಈ ವರ್ಷ ಆರು ಮಂದಿ ಸಾವನ್ನಪ್ಪಿದ್ದಾರೆ’ ಎಂದು ಸಚಿವರು ಮಾಹಿತಿ ನೀಡಿದರು.

ಮುಂಜಾಗ್ರತಾ ಕ್ರಮ: ‘ಸಭೆಯ ಉದ್ದೇಶವೇ ಸಾವು ಹೆಚ್ಚಾಗದಂತೆ ತಡೆಗಟ್ಟುವುದು. ಇದಕ್ಕಾಗಿ ಜನರಲ್ಲಿ ಜಾಗೃತಿ ಹೆಚ್ಚಿಸುವ ಕೆಲಸ ಮಾಡಬೇಕಿದೆ. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಈಗಾಗಲೇ ಜಾಹೀರಾತು ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಜಾಹೀರಾತುಗಳು ಬರುತ್ತಿವೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಿದ್ದೇವೆ’ ಎಂದರು.

**

ಖಾಸಗಿ ಆಸ್ಪತ್ರೆಗಳ ವೆಚ್ಚಕ್ಕೆ ಕಡಿವಾಣ

‘ಖಾಸಗಿ ಆಸ್ಪತ್ರೆಗಳ ಲ್ಯಾಬ್‌ಗಳಲ್ಲಿ ₹ 4,500ಕ್ಕಿಂತ ಹೆಚ್ಚಿನ ಹಣ ಪಡೆದು ಎಚ್‌1 ಎನ್‌1 ಪರೀಕ್ಷೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಮುಂದೆ ₹ 2,400 ಮಾತ್ರ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತಿದ್ದೇವೆ. ದರ ನಿಗದಿಯನ್ನು ಪರೀಕ್ಷಿಸಲು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತಿದೆ’ ಎಂದು ಪರಮೇಶ್ವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.