ADVERTISEMENT

ದೇವದಾಸಿ ಮಕ್ಕಳಿಗೆ ತಂದೆಯ ಹೆಸರು ಕಡ್ಡಾಯವಲ್ಲ: ಸಚಿವ ಹಾಲಪ್ಪ ಆಚಾರ್ ಸೂಚನೆ

ಆದೇಶ ಹೊರಡಿಸಲು ಸಚಿವ ಹಾಲಪ್ಪ ಆಚಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 18:52 IST
Last Updated 8 ಡಿಸೆಂಬರ್ 2022, 18:52 IST
 ಹಾಲಪ್ಪ ಆಚಾರ್
ಹಾಲಪ್ಪ ಆಚಾರ್    

ಬೆಂಗಳೂರು: ‘ದೇವದಾಸಿ ಮಹಿಳೆಯರ ಮಕ್ಕಳು ಸರ್ಕಾರಿ ಸೌಲಭ್ಯ ಪಡೆಯಲು ತಂದೆಯ ಹೆಸರು ದಾಖಲಿಸುವುದು ಕಡ್ಡಾಯವಲ್ಲ, ಐಚ್ಛಿಕ’ ಎಂಬ ಆದೇಶ ಹೊರಡಿಸಲು ಸರ್ಕಾರ ನಿರ್ಧರಿಸಿದೆ.

ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕುಂದುಕೊರತೆ ಪರಿಹಾರ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಶಾಲೆ, ಕಾಲೇಜಿಗೆ ಸೇರುವಾಗ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿ ಯಾವುದೇ ದಾಖಲೆಗಳಲ್ಲಿ ತಂದೆಯ ಹೆಸರು ದಾಖಲಿಸುವುದು ಈ ಮಕ್ಕಳಿಗೆ ಕಡ್ಡಾಯ ಇರಬಾರದು. ಈಗ ಕೆಲವೆಡೆ ತಂದೆಯ ಹೆಸರು ಕಡ್ಡಾಯ ಇರುವುದರಿಂದ ಮಕ್ಕಳು ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣ ನೀಡಿ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದರಿಂದ ಮಕ್ಕಳಿಗೆ ಅವಮಾನವಾಗುತ್ತಿದೆ ಎಂಬ ವಿಷಯದ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಯಿತು.

ADVERTISEMENT

‘ತಂದೆಯ ಹೆಸರು ನಮೂದಿಸುವುದು ಅಥವಾ ಕೈಬಿಡಲು ಅವಕಾಶ ಇರಬೇಕು. ಈ ಸಂಬಂಧ ಕೂಡಲೇ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

’ದೇವದಾಸಿ ಮಹಿಳೆಯರ ಮಕ್ಕಳಿಗೆ ಉನ್ನತ ಶಿಕ್ಷಣ, ವಸತಿ ಶಾಲೆಗಳಲ್ಲಿ ಪ್ರಾಧಾನ್ಯತೆ ನೀಡಬೇಕು. ಅಂಕ ಅಥವಾ ಪರೀಕ್ಷೆ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಅರ್ಜಿ ಸಲ್ಲಿಸಿದ ಕಡೆ ವ್ಯಾಸಂಗಕ್ಕೆ ಅವಕಾಶ ಸಿಗುವಂತಾಗಬೇಕು. ಸರ್ಕಾರದ ಸಮೀಕ್ಷೆಯಿಂದ ಹೊರಗುಳಿದಿರುವ ದೇವದಾಸಿ ಮಹಿಳೆಯರು ಮತ್ತವರ ಮಕ್ಕಳಿಗೆ ನಿವೇಶನ, ಮನೆ ಸೇರಿ ಯಾವುದೇ ಸವಲತ್ತುಗಳೂ ದೊರಕುತ್ತಿಲ್ಲ ಎಂಬ ದೂರುಗಳಿವೆ. ಆದ್ದರಿಂದ ಮರು ಸಮೀಕ್ಷೆ ನಡೆಸುವುದು ಸೂಕ್ತ. ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ತಡೆಯಲು ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕಾಗುತ್ತದೆ. ಈ ವಿಷಯಗಳಲ್ಲಿ ಅಗತ್ಯ ಎನಿಸಿದರೆ ಕಾನೂನು ತಿದ್ದುಪಡಿಗೂ ಸರ್ಕಾರ ಸಿದ್ಧವಿದೆ. ಬೆಳಗಾವಿ ಅಧಿವೇಶನದಲ್ಲೇ ಮಂಡಿಸಲು ಕ್ರಮ ಕೈಗೊಳ್ಳಿ’ ಎಂದು ಹಾಲಪ್ಪ ಆಚಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.