ADVERTISEMENT

ನಂದಿನಿ: ಅರ್ಧ ಲೀಟರ್‌ ಖರೀದಿದಾರರಿಗೆ ಬರೆ

ಹಾಲಿನ ದರ ಏರಿಕೆಗೆ ಗ್ರಾಹಕರ ಆಕ್ರೋಶ, ಅವೈಜ್ಞಾನಿಕ ದರ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 2:30 IST
Last Updated 2 ಆಗಸ್ಟ್ 2023, 2:30 IST
ನಿತ್ಯ 1ಲಕ್ಷ ಲೀಟರ್‌ ಹಾಲು ಮಾರಾಟ
ನಿತ್ಯ 1ಲಕ್ಷ ಲೀಟರ್‌ ಹಾಲು ಮಾರಾಟ   

ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ನಂದಿನಿ ಹಾಲಿನ ದರವನ್ನು ಅವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಿದ್ದು, ಅರ್ಧ ಲೀಟರ್‌ ಹಾಲಿನ ಪ್ಯಾಕೇಟ್‌ಗಳ ಖರೀದಿದಾರರಿಗೆ ಬರೆ ಹಾಕಿದೆ ಎಂದು ಗ್ರಾಹಕರು ದೂರಿದ್ದಾರೆ.

ಒಂದು– ಎರಡು ಲೀಟರ್ ಹಾಲು ಬಳಸುವವರು ಒಂದು ಲೀಟರ್‌ನ ಪ್ಯಾಕೆಟ್ ಖರೀದಿಸುವ ಬದಲು ಅರ್ಧ ಲೀಟರ್‌ನ ಎರಡು ಅಥವಾ ನಾಲ್ಕು ಪ್ಯಾಕೆಟ್ ಖರೀದಿಸುವವರ ಸಂಖ್ಯೆ ಹೆಚ್ಚಿದೆ. ಕೆಎಂಎಫ್‌ನ ಪರಿಷ್ಕರಣೆ ಈ ಬಹುಸಂಖ್ಯಾತ ಗ್ರಾಹಕರ ಜೇಬಿಗೆ ನಿತ್ಯವೂ ಕತ್ತರಿ ಹಾಕುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ದೂರಿದ್ದಾರೆ.

‘ಶುಭಂ ಹಾಲು’ (ಎಸ್‌ಎಸ್‌ಎಂ) ಪ್ರತಿ ಲೀಟರ್ ಹಾಲಿಗೆ ಹಳೆ ಮಾರಾಟ ದರವು ₹45 ಇತ್ತು. ಇದಕ್ಕೆ ₹3 ದರ ಹೆಚ್ಚಿಸಿ ₹48 ನಿಗದಿ ಪಡಿಸಲಾಗಿದೆ. ಶುಭಂ ಹಾಲಿನ ಅರ್ಧ ಲೀಟರ್‌ನ ಪರಿಷ್ಕೃತ ದರವು ₹25 ಆಗಿದ್ದು ಹಳೆಯ ಒಂದು ಲೀಟರ್‌ ದರಕ್ಕೆ ಹೋಲಿಸಿದರೆ ಅರ್ಧ ಲೀಟರ್‌ ಎರಡು ಪ್ಯಾಕೆಟ್‌ ಖರೀದಿಸಿದರೆ ಹೆಚ್ಚುವರಿಯಾಗಿ ₹5 ಪಾವತಿಸಬೇಕಿದೆ. ಈ ಹಿಂದೆ ಒಂದು ಲೀಟರ್‌ಗೆ ₹45 ಇದ್ದಾಗ, ಅರ್ಧ ಲೀಟರ್‌ ಹಾಲಿಗೆ ₹23 ಪಡೆಯಲಾಗುತ್ತಿತ್ತು. ಆಗಲೇ, ಅರ್ಧ ಲೀಟರ್ ಹಾಲಿನ ಮೇಲೆ 50 ಪೈಸೆ ಹೆಚ್ಚುವರಿ ವಸೂಲಿ ಮಾಡುತ್ತಿದ್ದ ಕೆಎಂಎಫ್‌ ಮತ್ತೆ ಬರೆ ಹಾಕಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಅದೇ ರೀತಿ ಟೋನ್ಡ್‌ ಹಾಲಿನ (ಟಿಎಂ) ಪ್ರತಿ ಲೀಟರ್‌ಗೆ ಹಳೆ ದರವು ₹39 ಆಗಿತ್ತು. ಇದಕ್ಕೆ ₹3ರಂತೆ ಪರಿಷ್ಕರಿಸಿ ಹೊಸ ದರವನ್ನು ₹42ಕ್ಕೆ ಏರಿಸಲಾಗಿದೆ. ಹೊಸ ದರದಲ್ಲಿ (₹22) ಅರ್ಧ ಲೀಟರ್‌ನ ಎರಡು ಪ್ಯಾಕೆಟ್‌ಗಳನ್ನು ಖರೀದಿಸಿದರೆ ₹44 ಆಗಲಿದೆ. ಹಳೆ ದರವಾದ ₹39ಕ್ಕೆ ಹೆಚ್ಚುವರಿ ₹3 ಸೇರಿಸಿದರೆ ಅರ್ಧ ಲೀಟರ್‌ ಎರಡು ಪ್ಯಾಕೆಟ್‌ಗಳಿಗೆ ₹42 ಆಗಬೇಕಿತ್ತು. ಆದರೆ, ಅರ್ಧ ಲೀಟರ್‌ ಖರೀದಿದಾರರು ಹೆಚ್ಚುವರಿಯಾಗಿ ₹5 ಪಾವತಿಸಬೇಕಿದೆ. ಈ ಮಾದರಿ ಹಾಲಿನಲ್ಲೂ ಹಿಂದೆಯೇ 50 ಪೈಸೆ ಹೆಚ್ಚುವರಿಯಾಗಿ ಪಡೆಯಲಾಗುತ್ತಿತ್ತು’ ಎಂದು ಗ್ರಾಹಕ ಮಂಜುನಾಥ್‌ ನೋವು ತೋಡಿಕೊಂಡಿದ್ದಾರೆ.

‘ಪ್ರತಿ ಲೀಟರ್​ ಹಾಲಿಗೆ ₹3 ಹೆಚ್ಚಿಸಲಾಗಿದೆ. ಅದರಂತೆ ಅರ್ಧ ಲೀಟರ್‌ಗೆ ₹1.50 ಹೆಚ್ಚಿಸಬೇಕಿತ್ತು.  ಶುಭಂ ಹಾಲಿನ 500 ಮಿ.ಲೀ ಪ್ಯಾಕೆಟ್‌ಗೆ ₹23ರಿಂದ ₹24.50ಕ್ಕೆ, ಟೋನ್ಡ್‌ ಹಾಲಿನ ಅರ್ಧ ಲೀಟರ್‌ ದರವನ್ನು ₹20ರಿಂದ ₹21.50 ಏರಿಸಬೇಕಿತ್ತು. ಆದರೆ, ಚಿಲ್ಲರೆ ಸಮಸ್ಯೆ ಕಾರಣದಿಂದ 500 ಮಿ.ಲೀ ಪೊಟ್ಟಣಕ್ಕೆ 10 ಮಿ.ಲೀ ಹಾಲನ್ನು ಹೆಚ್ಚಿಗೆ ನೀಡಿ ಸರಿದೂಗಿಸಲಾಗಿದೆ. ಹಳೆಯ ಅರ್ಧ ಲೀಟರ್‌ ಹಾಲಿನ ದರವನ್ನೇ ಪರಿಗಣಿಸಿ ಏರಿಕೆ ಮಾಡಲಾಗಿದೆ. ಒಂದು ಲೀಟರ್‌ ಆಧರಿಸಿ ದರ ಪರಿಷ್ಕರಿಸಿಲ್ಲ’ ಎಂದು ಕೆಎಂಎಫ್‌ ಅಧಿಕಾರಿಗಳು ಹೇಳಿದರು.

ಹೆಚ್ಚುವರಿ ಹಾಲಿನ ಬದಲಿಗೆ 50 ಪೈಸೆಯಷ್ಟು ಕಡಿಮೆ ಮಾಡಬಹುದಿತ್ತು. ಅದು ದುರುಪಯೋಗವಾಗುವ ಸಾಧ್ಯತೆಯಿತ್ತು. ಕೆಎಂಎಫ್‌ಗೆ ಹಣ ಬಂದರೆ ರೈತರಿಗೆ ಅನುಕೂಲವಾಗಲಿದೆ ಹೆಚ್ಚುವರಿ ಹಾಲು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಸರ್ಕಾರದ ಅನುಮೋದನೆ ಬಳಿಕ ಕೆಎಂಎಫ್‌ ಎಲ್ಲ ಮಾದರಿಯ ಹಾಲಿನ ಮೇಲೆ ₹3 ಹೆಚ್ಚಿಸಿದೆ. ಒಂದು ಲೀಟರ್‌ಗೆ ಹಿಂದಿನ ದರಕ್ಕೆ(₹45) ₹3 ಸೇರಿಸಿದರೆ ₹48 ಆಗುತ್ತದೆ. ಆ ಲೆಕ್ಕದಲ್ಲಿ ಅರ್ಧ ಲೀಟರ್‌ ಹಾಲಿಗೆ ₹24 ಆಗಬೇಕಿತ್ತು. ಹಾಗೆ ಮಾಡುವ ಬದಲು, ಅರ್ಧ ಲೀಟರ್‌ಗೆ ಇದ್ದ ದರಕ್ಕೆ, ಅದಕ್ಕೆ ಸಮನಾಗಿ ಹೆಚ್ಚಳ ಮಾಡುವ ಜತೆಗೆ 50 ಪೈಸೆ ಹೆಚ್ಚುವರಿ ವಸೂಲು ಮಾಡಲಾಗಿದೆ. ಇದಕ್ಕೆ ಕೆಎಂಎಫ್ ನೀಡುತ್ತಿರುವ ಸಮರ್ಥನೆ ಎಷ್ಟು ಸರಿ ಎಂದು ಗ್ರಾಹಕಿ ಅನುರಾಧ ಪ್ರಶ್ನಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಹಾಲಿನ ದರವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಲಾಗಿದೆ ಎಂದು ಗ್ರಾಹಕರಾದ ಎಸ್‌. ಚಂದನಾ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.