ADVERTISEMENT

ವಾಲ್ಮೀಕಿ ಗುರುಪೀಠದ ವಾದಕ್ಕೆ ಹಾಲುಮತದವರ ಆಕ್ಷೇಪ

ಕುರುಬರು ಯಾರ ಹಕ್ಕನ್ನೂ ಕಸಿಯುವುದಿಲ್ಲ: ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ,

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 19:48 IST
Last Updated 1 ಏಪ್ರಿಲ್ 2021, 19:48 IST

ಬೆಂಗಳೂರು: ‘ಕುರುಬರು ಮೂಲತಃ ಬುಡಕಟ್ಟು ಜನಾಂಗದವರು. ಸಂವಿಧಾನ ರಚನೆಯಾದಾಗಿನಿಂದಲೂ ಪರಿಶಿಷ್ಟ ಪಂಗಡದ (ಎಸ್‌.ಟಿ) ಮೀಸಲಾತಿ ಪಟ್ಟಿಯಲ್ಲಿದ್ದಾರೆ. ಹಾಲುಮತ ಸಮಾಜದ ಇತಿಹಾಸ ಪುರುಷರ ಹೆಸರನ್ನು ಬಳಸಿಕೊಂಡು ಮೀಸಲಾತಿ ವಿಸ್ತಾರ ಮಾಡಿಕೊಳ್ಳುವ ಅನಿವಾರ್ಯ ಕುರುಬ ಸಮಾಜಕ್ಕಿಲ್ಲ’ ಎಂದು ಹಾಲುಮತ ಮಹಾಸಭಾ ಸ್ಪಷ್ಟಪಡಿಸಿದೆ.

‘ವಾಲ್ಮೀಕಿ ಸಮುದಾಯದ ಹಕ್ಕ–ಬುಕ್ಕರ ಹೆಸರನ್ನು ಬಳಸಿಕೊಂಡು ಕುರುಬ ಸಮಾಜದವರು ಮೀಸಲಾತಿ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ಹರಿಹರದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಬಳ್ಳಾರಿ ಜಿಲ್ಲಾ ಧರ್ಮದರ್ಶಿ ಜಂಬಯ್ಯ ನಾಯಕ ಅವರು ಬುಧವಾರ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ, ‘ಕುರುಬರು ಯಾರನ್ನೂ ವಿರೋಧಿಸುವುದಿಲ್ಲ. ಯಾರ ಹಕ್ಕನ್ನೂ ಕಸಿಯುವುದಿಲ್ಲ. 1991ರಲ್ಲಿ ಬೇರೆ ರಾಜ್ಯದಲ್ಲಿರುವ ಜಾತಿಯ ಸಮನಾರ್ಥಕ ಪದದನ್ವಯ ಎಸ್‌.ಟಿ ಮೀಸಲಾತಿ ಪಟ್ಟಿಯೊಳಗೆ ಸೇರಿದ್ದಾರೆ. ಆದರೆ, 1950ರ ಗೆಜೆಟ್‌ನಲ್ಲಿ ಪ್ರಕಟವಾಗಿರುವ ಆರು ಜಾತಿಗಳಲ್ಲಿ ಜೇನು ಕುರುಬ ಮತ್ತು ಕಾಡು ಕುರುಬ ಕೂಡ ಇದೆ. 1977ರಲ್ಲಿ ಕುರುಬ ಜಾತಿಯ ಗೊಂಡ, ರಾಜಗೊಂಡ, ಕುರುಮನ್ಸ್, ಕಾಟ್ಟುನಾಯಕನ್, ಕುರುಬ ಸೇರಿ ಒಟ್ಟು ಆರು ಜಾತಿಗಳು ಎಸ್‌.ಟಿ ಪಟ್ಟಿಯಲ್ಲಿವೆ. ಕುರುಬರು ಹೊಸದಾಗಿ ಎಸ್‌.ಟಿ ಮೀಸಲಾತಿಗೆ ಬೇಡಿಕೆ ಸಲ್ಲಿಸುತ್ತಿಲ್ಲ’ ಎಂದಿದ್ದಾರೆ.

ADVERTISEMENT

‘ಎಸ್‌.ಟಿ ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಈಗಾಗಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ವಿಜಯನಗರದ ಸಂಸ್ಥಾಪಕರಾದ ಹಕ್ಕ–ಬುಕ್ಕರು ಹಾಲುಮತ ಸಮಾಜದವರು ಎಂಬ ಸತ್ಯವನ್ನು ಶಾಸನಗಳು ಹೇಳುತ್ತವೆ. ಡಾ. ಲಿಂಗದಹಳ್ಳಿ ಹಾಲಪ್ಪನವರು ಬರೆದ ‘ವಿಜಯನಗರ ಸಾಮ್ರಾಜ್ಯ’ ಸೇರಿದಂತೆ ಹಲವು ಗ್ರಂಥದಲ್ಲಿ ದಾಖಲೆಗಳ ಸಮೇತ ಉಲ್ಲೇಖಿಸಲಾಗಿದೆ. ಪ್ರತಿವರ್ಷ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನವನ್ನು ರಾಜ್ಯದ ಎಲ್ಲೆಡೆ ಆಚರಣೆ ಮಾಡಲಾಗುತ್ತಿದೆ. ಈ ವರ್ಷವೂ ಏ.18ರಂದು ರಾಜ್ಯದಾದ್ಯಂತ ಆಚರಣೆ ಮಾಡಲಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.