ADVERTISEMENT

ಜಗತ್ತಿನಲ್ಲಿ ಕಡ್ಡಾಯವಾಗಿ ನೋಡಲೇಬೇಕಾದ ತಾಣಗಳಲ್ಲಿ ಹಂಪಿಗೆ ಎರಡನೇ ಸ್ಥಾನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಜನವರಿ 2019, 12:56 IST
Last Updated 11 ಜನವರಿ 2019, 12:56 IST
ಹಂಪಿ ಪರಿಸರ
ಹಂಪಿ ಪರಿಸರ   

ಹೊಸಪೇಟೆ: ಜಗತ್ತಿನಲ್ಲಿ ಕಡ್ಡಾಯವಾಗಿ ನೋಡಲೇಬೇಕಾದ 52 ಪ್ರವಾಸಿ ತಾಣಗಳನ್ನು ‘ನ್ಯೂಯಾರ್ಕ್‌ ಟೈಮ್ಸ್‌’ ಗುರುತಿಸಿದ್ದು, ಅದರಲ್ಲಿ ವಿಶ್ವವಿಖ್ಯಾತ ಹಂಪಿಗೆ ಎರಡನೇ ಸ್ಥಾನ ಕಲ್ಪಿಸಿದೆ.

ಕೆಲ ವರ್ಷಗಳ ಹಿಂದೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಹಂಪಿಯನ್ನು ಸೇರಿಸಲಾಗಿತ್ತು. ಇತ್ತೀಚೆಗೆ ಏಷ್ಯಾದ ಅತ್ಯುತ್ತಮ ಪ್ರವಾಸಿ ತಾಣ ಎಂದು ಹೆಸರಿಸಲಾಗಿತ್ತು. ಅದರ ಬೆನ್ನಲ್ಲೇ ನ್ಯೂಯಾರ್ಕ್‌ ಟೈಮ್ಸ್‌ ಜಾಗತಿಕ ಪ್ರವಾಸಿ ತಾಣಗಳಲ್ಲಿ ಹಂಪಿಯನ್ನು ಹೆಸರಿಸಿರುವುದರಿಂದ ಭೂಖಂಡದಲ್ಲಿ ಅದರ ಹಿರಿಮೆ ಹೆಚ್ಚಿದಂತಾಗಿದೆ. ಪಟ್ಟಿಯಲ್ಲಿ ಪೋರ್ಟೊ ರಿಕೋ ಮೊದಲ ಸ್ಥಾನ ಗಿಟ್ಟಿಸಿದೆ.

ಹಂಪಿ ಜಗತ್ತಿನ ಅಪರೂಪದ ಪುರಾತನ, ಶ್ರೀಮಂತ ವಾಸ್ತುಶಿಲ್ಪದಿಂದ ಕೂಡಿರುವ ಸ್ಮಾರಕಗಳನ್ನು ಹೊಂದಿದೆ. ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಹಂಪಿ ಸಮೀಪದ ಜಿಂದಾಲ್‌ಗೆ ನೇರ ವಿಮಾನ ಸೌಲಭ್ಯ ಕಲ್ಪಿಸಿರುವುದರಿಂದ ಜಗತ್ತಿನ ಯಾವ ಭಾಗದ ಜನ ಕೂಡ ಅಲ್ಲಿಗೆ ಭೇಟಿ ಕೊಡಬಹುದು ಎಂದು ಪತ್ರಿಕೆ ಉಲ್ಲೇಖಿಸಿದೆ.

ADVERTISEMENT

ಹಂಪಿಗೆ ಈ ಸ್ಥಾನಮಾನ ಸಿಕ್ಕಿರುವುದಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎ.ಎಸ್‌.ಐ.) ಹಂಪಿ ವೃತ್ತದ ಅಧಿಕಾರಿ, ಪುರಾತತ್ವ ವಿಭಾಗದ ಪ್ರಾಧ್ಯಾಪಕರು, ಪರಿಸರ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

‘ಅನ್ಯ ದೇಶದ ಪತ್ರಿಕೆಯೊಂದು ಹಂಪಿಯನ್ನು ಗುರುತಿಸಿ, ಅದಕ್ಕೆ ಎರಡನೇ ಸ್ಥಾನ ಕೊಟ್ಟಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇದರಿಂದ ಮತ್ತಷ್ಟು ಜನ ಹಂಪಿಗೆ ಬರುತ್ತಾರೆ’ ಎಂದು ಎ.ಎಸ್‌.ಐ. ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಸಂತಸ ವ್ಯಕ್ತಪಡಿಸಿದರು.

‘ಈಗ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಸ್ಮಾರಕಗಳನ್ನು ಸಂರಕ್ಷಿಸುವುದರ ಜತೆಗೆ ಹೆಚ್ಚಿನ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಿಸುವುದು ನಮ್ಮ ಹೊಣೆಗಾರಿಕೆ. ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ’ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕಸಿ.ಎಸ್‌. ವಾಸುದೇವನ್‌, ‘ಈಗಿರುವ ಮೂಲಸೌಕರ್ಯ ಸಾಲದು. ಸಾರಿಗೆ ವ್ಯವಸ್ಥೆ ಇನ್ನಷ್ಟು ಸುಧಾರಣೆ ಆಗಬೇಕು. ಬಾದಾಮಿ, ಪಟ್ಟದಕಲ್ಲು ಹಾಗೂ ಹಂಪಿಯನ್ನು ಒಂದು ಪ್ರವಾಸಿ ವೃತ್ತ ಮಾಡಬೇಕು. ಭಾರತೀಯರು ಮತ್ತು ವಿದೇಶಿಯರಿಗೆ ಏಕರೂಪದ ಪ್ರವೇಶ ಶುಲ್ಕ ನಿಗದಿಪಡಿಸಬೇಕು. ಆಗ ಇನ್ನಷ್ಟು ವಿದೇಶಿ ಪ್ರವಾಸಿಗರು ಬರುತ್ತಾರೆ’ ಎಂದರು.

‘ಎಲ್ಲ ಸ್ಮಾರಕಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ, ನಿರ್ವಹಣೆ ಮಾಡಬೇಕು. ಹಂಪಿಗೆ ಸಂಬಂಧಿಸಿದ ಎಲ್ಲ ಪ್ರಕಾರದ ಸಾಹಿತ್ಯ, ಮಾಹಿತಿ ಒಳಗೊಂಡ ಪುಸ್ತಕಗಳು ಸಿಗುವಂತಾಗಬೇಕು. ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು’ ಎಂದು ಹೇಳಿದರು.

‘ನಮಗೀಗ ಅಗತ್ಯವಾಗಿ ಬೇಕಿರುವುದು ಹಂಪಿ ಸುತ್ತಮುತ್ತಲಿನ ಪರಿಸರದ ಸಂರಕ್ಷಣೆ. ಹಂಪಿ ಒಂದು ಜೀವಂತ ಪರಂಪರೆ. ಅದು ಪ್ರಕೃತಿಯ ನಡುವೆ ಹರಿದು ಹಂಚಿ ಹೋಗಿದೆ. ಪ್ರಕೃತಿ ಉಳಿದರೆ ಹಂಪಿ ಉಳಿಯುತ್ತದೆ. ಆ ನಿಟ್ಟಿನಲ್ಲಿ ಕೆಲಸ ಆಗಬೇಕು. ಮಾಸ್ಟರ್‌ ಪ್ಲಾನ್‌ ಹೆಸರಿನಲ್ಲಿ ಹಂಪಿಗೆ ಧಕ್ಕೆಯಾಗುವಂತಹ ಯೋಜನೆಗಳನ್ನು ಜಾರಿಗೆ ತರಬಾರದು’ ಎಂದು ಹಂಪಿ ನಿವಾಸಿ, ಪರಿಸರ ಹೋರಾಟಗಾರ ಶಿವಕುಮಾರ ಮಾಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.