ADVERTISEMENT

‘ಬೆಂಗಳೂರು - ಕೋಲಾರ ಮಧ್ಯೆ ಹಾರ್ಡ್‌ವೇರ್ ಪಾರ್ಕ್: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 21:59 IST
Last Updated 9 ಸೆಪ್ಟೆಂಬರ್ 2021, 21:59 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಬೆಂಗಳೂರು–ಕೋಲಾರ ಮಧ್ಯೆ ಹಾರ್ಡ್‌ವೇರ್ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಎರಡು ದಿನಗಳ ದೆಹಲಿ ಪ್ರವಾಸ ಫಲಪ್ರದವಾಗಿದೆ’ ಎಂದರು.

‘ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಸೌಲಭ್ಯ ಹಾಗೂ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸುವ ಕುರಿತುಕೇಂದ್ರ ಐಟಿ-ಬಿಟಿ ಮತ್ತು ಕೌಶಲ ಅಭಿವೃದ್ಧಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರೊಂದಿಗೆ ಚರ್ಚಿಸಿದ್ದೇನೆ.‌ ರಾಜ್ಯದಲ್ಲಿ ಕೌಶಲ (ಸ್ಕಿಲ್) ವಿಶ್ವವಿದ್ಯಾಲಯ ಆರಂಭಿಸುವ ಉದ್ದೇಶವು ಸಚಿವರಿಗಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

ADVERTISEMENT

‘ಎರಡು ವರ್ಷದಿಂದ ನನೆಗುದಿಗೆ ಬಿದ್ದಿರುವ ಸೆಟಲೈಟ್ ಟೌನ್ ರಿಂಗ್ ರೋಡ್ (ದಾಬಸ್‌ಪೇಟೆಯಿಂದ ಮೈಸೂರು ರಸ್ತೆವರೆಗೆ) ನಿರ್ಮಾಣ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದೆ’ ಎಂದು ಹೇಳಿದರು.‌

‘ಉತ್ತರ ಕರ್ನಾಟಕದ ವಿಜಯಪುರ- ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಗೆ ಡಿಪಿಆರ್ ಆಗುತ್ತಿದ್ದು, ಭಾರತ್‌ ಮಾಲಾ ರಸ್ತೆ ಯೋಜನೆಯ ಎರಡನೇ ಹಂತದಲ್ಲಿ ಇನ್ನೂ ಐದು ರಸ್ತೆಗಳ ಕಾಮಗಾರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ’ ಎಂದರು.

‘ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ₹ 400 ಕೋಟಿ ಬಿಡುಗಡೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್‌ ಸಿಂಗ್ ಪುರಿ ಸೂಚಿಸಿದ್ದಾರೆ. ಇನ್ನು ₹ 1,500 ಕೋಟಿ ಬಿಡುಗಡೆ ಆಗಬೇಕಿದೆ’ ಎಂದರು.

‘ರೈಲ್ವೆ ಯೋಜನೆಗಳ ಬಗ್ಗೆಯೂ ಚರ್ಚಿಸಲಾಯಿತು. ಉಪನಗರ ರೈಲು ಯೋಜನೆ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ, ತುಮಕೂರು–ದಾವಣಗೆರೆ, ಹುಬ್ಬಳ್ಳಿ – ಬೆಳಗಾವಿ, ಬೀದರ್- ಕಲಬುರ್ಗಿ ರೈಲ್ವೆ ಮಾರ್ಗ ಅಭಿವೃದ್ಧಿಗೂ ಮನವಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.