ADVERTISEMENT

ನೀರಿನ ನಿರ್ವಹಣೆಗೆ ‘ಹಾರಿಜಾನ್ 2020’

ಭಾರತ–ಐರೋಪ್ಯ ಒಕ್ಕೂಟದ ನಡುವೆ ಸಹಕಾರ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:27 IST
Last Updated 18 ಫೆಬ್ರುವರಿ 2019, 20:27 IST
   

ಬೆಂಗಳೂರು: ಐರೋಪ್ಯ ಒಕ್ಕೂಟ ಮತ್ತು ಭಾರತವು ಜಲ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತದಲ್ಲಿ ಏಳು ಸಂಶೋಧನಾ ಯೋಜನೆಗಳನ್ನು ಜಂಟಿಯಾಗಿ ಕೈಗೆತ್ತಿಕೊಳ್ಳಲಿವೆ. ಈ ಸಂಬಂಧ ‘ಹಾರಿಜಾನ್ 2020’ ಎಂಬ ಸಹಕಾರ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ನೀರಿಗೆ ಸಂಬಂಧಿಸಿದ ಸದ್ಯದ ಸವಾಲುಗಳನ್ನು ಹೇಗೆ ಎದುರಿಸಬಹುದು ಎಂಬುದನ್ನು ಈ ಯೋಜನೆಗಳ ಅಡಿ ಪರಿಶೀಲಿಸಲಾಗುತ್ತದೆ. ಇದಕ್ಕಾಗಿ ಹೊಸ ಅನ್ವೇಷಣೆಗಳನ್ನು ಕೈಗೊಳ್ಳಲಾಗುತ್ತದೆ. ಈ ಸಂಬಂಧ ಫೆ.14ರಂದು ಜಂಟಿ ಘೋಷಣೆ ಹೊರಡಿಸಲಾಗಿದೆ.

‘ಭಾರತದಲ್ಲಿ ಕುಡಿಯುವ ನೀರಿನ ಗುಣಮಟ್ಟದ ಹೆಚ್ಚಳ, ಕೊಳಚೆ ನೀರಿನ ಶುದ್ಧೀಕರಣ ಮತ್ತು ಮರು ಬಳಕೆ ಸಾಧ್ಯತೆಗಳು, ಕೊಳಚೆ ನೀರಿನ ಸಮರ್ಥ ನಿರ್ವಹಣೆಗೆ ಪರಿಹಾರ ಕಂಡುಕೊಳ್ಳುವುದು ಈ ಸಹಕಾರದ ಪ್ರಮುಖ ಉದ್ದೇಶ’ ಎಂದು ಜಂಟಿ ಘೋಷಣೆಯಲ್ಲಿ ವಿವರಿಸಲಾಗಿದೆ.

ADVERTISEMENT

ಭಾರತ ಮತ್ತು ಯೂರೋಪ್‌ನ ವಿವಿಗಳು, ಸಂಶೋಧನಾ ಸಂಸ್ಥೆಗಳು, ನಗರಪಾಲಿಕೆ, ಖಾಸಗಿ ಸಂಸ್ಥೆ ಸೇರಿಈ ಯೋಜನೆಗಳಲ್ಲಿ 130ಕ್ಕೂ ಹೆಚ್ಚು ಸಂಸ್ಥೆಗಳು ಭಾಗಿಯಾಗಲಿವೆ. ಐಐಟಿ ಬಾಂಬೆ, ಐಐಟಿ ಭುವನೇಶ್ವರ, ಐಐಟಿ ಗುವಾಹಟಿ, ಐಐಟಿ ರೂರ್ಕಿ, ಐಐಟಿ ಡೆಹಲಿ, ಸಿಎಸ್‌ಐಆರ್–ಎನ್‌ಇಇಆರ್‌ಐ ಮತ್ತು ಟೆರಿ ಸಂಸ್ಥೆ ಈ ಯೋಜನೆಗಳಲ್ಲಿ ಭಾಗಿಯಾಗಲಿವೆ.

‘ಹಾರಿಜಾನ್ 2020’ ಮುಖ್ಯಾಂಶಗಳು

*ಗಂಗಾನದಿ ಪುನರುಜ್ಜೀವನಕ್ಕೆ ತಾಂತ್ರಿಕ ನೆರವು
*ಕೊಳಚೆ ನೀರಿನ ಶುದ್ಧೀಕರಣ ಮತ್ತು ನಿರ್ವಹಣೆ ಸಂಬಂಧಿತಂತ್ರಜ್ಞಾನಗಳನ್ನು ಐರೋಪ್ಯ ಒಕ್ಕೂಟವು ಭಾರತಕ್ಕೆ ಒದಗಿಸಲಿದೆ.
*ಈ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಯನ್ನು ಭಾರತದಲ್ಲಿ ನಡೆಸಲಾಗುತ್ತದೆ. ಭಾರತದ ಅಗತ್ಯಕ್ಕೆ ತಕ್ಕಂತೆ ಇವನ್ನು ಮಾರ್ಪಡಿಸಲಾಗುತ್ತದೆ. ಜತೆಗೆ ಹೊಸ ತಂತ್ರಜ್ಞಾನಗಳ ಅನ್ವೇಷಣೆಗೂ ಅವಕಾಶವಿದೆ

ಏಳು ಯೋಜನೆಗಳು

1.ಅತ್ಯಂತ ಕಡಿಮೆ ವೆಚ್ಚದಲ್ಲಿ ನೀರಿನ ಶುದ್ಧೀಕರಣ ವಿಧಾನ ಅನ್ವೇಷಣೆ

2.ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಮೂಲಗಳ ನಿರ್ವಹಣೆಗೆ ಅಗ್ಗದ ತಂತ್ರಜ್ಞಾನ ಅನ್ವೇಷಣೆ

3.ಕೊಳಚೆ ನೀರಿನ ಸಂಸ್ಕರಣೆಗೆ ನವೀನ ತಂತ್ರಜ್ಞಾನ ಅಳವಡಿಕೆ

4.ನೈಸರ್ಗಿಕವಾಗಿ ನೀರಿನ ಶುದ್ಧೀಕರಣ ಸಾಧ್ಯತೆಗಳ ಪರಿಶೀಲನೆ, ಸುಸ್ಥಿರ ವಿಧಾನ ರೂಪಿಸಲು ಯತ್ನ

5.ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೊಳಚೆ ನೀರಿನ ಮರುಬಳಕೆ ಸಾಧ್ಯತೆಗಳ ಪರಿಶೀಲನೆ

6.ಕೊಳಚೆ ನೀರಿನ ಸಂಸ್ಕರಣೆಗೆ ಭಾರತದಲ್ಲಿ ಲಭ್ಯವಿರುವ ವಿಧಾನಗಳಲ್ಲಿ ಯಾವುದು ಹೆಚ್ಚು ಲಾಭದಾಯಕ ಎಂಬುದರ ಬಗ್ಗೆ ಸಂಶೋಧನೆ

7.ದೇಶದ ಎಲ್ಲಾ ಜಲಮೂಲಗಳ ರಕ್ಷಣೆ, ನಿರ್ವಹಣೆ ಮತ್ತು ಸಂಸ್ಕರಣೆಗೆ ನೀತಿ ಮಟ್ಟದಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ಅಧ್ಯಯನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.