ADVERTISEMENT

ಹೃದಯಾಘಾತದಿಂದ ಸರಣಿ ಸಾವು: ಉನ್ನತ ಮಟ್ಟದ ಸಮಿತಿ, 10 ದಿನದಲ್ಲಿ ವರದಿಗೆ CM ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜುಲೈ 2025, 11:41 IST
Last Updated 1 ಜುಲೈ 2025, 11:41 IST
   

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ 20ಕ್ಕೂ ಅಧಿಕ ಮಂದಿ ಹೃದಯಾಘಾತದಿಂದ ಮೃತಪಟ್ಟ ‍ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಾವಿಗೆ ನಿಖರ ಕಾರಣ ಪತ್ತೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿದೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್’ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

10 ದಿನಗಳ ಒಳಗಾಗಿ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಎಳೆಯ ವಯಸ್ಸಿನವರ, ಯುವ ಜನರ ಹಠಾತ್ ನಿಧನಕ್ಕೆ ಕಾರಣಗಳೇನು? ಕೋವಿಡ್ ಲಸಿಕೆಯ ದುಷ್ಪರಿಣಾಮಗಳೇನಾದರೂ ಇರಬಹುದೇ? ಎಂದು ಕೂಲಂಕಷವಾಗಿ ಅಧ್ಯಯನ ನಡೆಸಲು ಇದೇ ಸಮಿತಿಗೆ ಕಳೆದ ಫೆಬ್ರವರಿ ತಿಂಗಳಲ್ಲೇ ಆದೇಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೃದ್ರೋಗಿಗಳನ್ನು ಪರಿಶೀಲನೆಗೊಳಪಡಿಸಿ, ವಿಶ್ಲೇಷಣೆ ಮಾಡುವ ಕಾರ್ಯ ಕೂಡ ಪ್ರಗತಿಯಲ್ಲಿದೆ’ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿರುವ ಬಿಜೆಪಿ ನಾಯಕರ ನಡೆಯನ್ನು ಖಂಡಿಸಿದ ಅವರು, ತರಾತುರಿಯಲ್ಲಿ ಕೊರೊನಾ ಲಸಿಕೆಗೆ ಅಧಿಕೃತ ಅನುಮೋದನೆ ಕೊಟ್ಟು, ಜನರಿಗೆ ಹಂಚಿದ್ದು ಕೂಡ ಈ ಸಾವುಗಳಿಗೆ ಕಾರಣವಿರಬಹುದು ಎಂಬುದನ್ನು ಅಲ್ಲಗಳೆಯಲಾಗದು, ಕಾರಣ ವಿಶ್ವದ ಅನೇಕ ಅಧ್ಯಯನಗಳು ಇತ್ತೀಚೆಗೆ ಹೆಚ್ಚಾಗಿರುವ ಹೃದಯ ಸ್ತಂಭನಕ್ಕೆ ಕೊವಿಡ್ ಲಸಿಕೆ ಕಾರಣ ಎಂಬುದನ್ನು ಹೇಳಿವೆ. ಈ ವಿಚಾರದಲ್ಲಿ ಬಿಜೆಪಿಯವರು ನಮ್ಮನ್ನು ಟೀಕಿಸುವ ಮುನ್ನ ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಲಿ ಎಂದು ಟೀಕಿಸಿದ್ದಾರೆ.

‘ಹಾಸನ ಜಿಲ್ಲೆಯು ಸೇರಿದಂತೆ ರಾಜ್ಯದಲ್ಲಿ ಸಂಭವಿಸುತ್ತಿರುವ ಹಠಾತ್ ಸರಣಿ ಸಾವುಗಳಿಗೆ ನೈಜ ಕಾರಣ ಪತ್ತೆಮಾಡಿ, ತಡೆಯುವ ನಿಟ್ಟಿನಲ್ಲಿ ನಾವು ಸಂಪೂರ್ಣ ಬದ್ಧರಿದ್ದೇವೆ. ಈ ಉದ್ದೇಶದಿಂದಲೇ ಹೃದಯ ಜ್ಯೋತಿ ಮತ್ತು ಗೃಹ ಆರೋಗ್ಯದಂತಹ ಯೋಜನೆಗಳನ್ನು ಈಗಾಗಲೇ ಜಾರಿಗೆಕೊಟ್ಟು, ಸಾರ್ವಜನಿಕರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಡಾ. ರವೀಂದ್ರನಾಥ್ ಅವರ ನೇತೃತ್ವದ ತಜ್ಞರ ಸಮಿತಿ ವರದಿ ಆಧರಿಸಿ ಅಗತ್ಯ ಕ್ರಮಗಳನ್ನು ಕೂಡ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ಜನರ ಆರೋಗ್ಯ ರಕ್ಷಣೆಗಾಗಿ ಒಂದು ಸರ್ಕಾರವಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಾವು ಮಾಡುತ್ತಿದ್ದು, ಸಾರ್ವಜನಿಕರು ಎದೆನೋವು, ಉಸಿರಾಟದ ತೊಂದರೆ ಕಂಡುಬಂದರೆ ಅಲಕ್ಷ್ಯ ತೋರದೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.