ADVERTISEMENT

‘ಹಾಸನದಲ್ಲಿ ಲೋಕೋಪಯೋಗಿ ಸಚಿವರ ಮಾತೇ ಅಂತಿಮ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 19:56 IST
Last Updated 6 ಮಾರ್ಚ್ 2019, 19:56 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ರಾಜ್ಯ ಲೋಕೋಪಯೋಗಿ ಸಚಿವರ ಮಾತೇ ಅಂತಿಮವಾಗಿದೆ. ಅಲ್ಲಿ ರಾಜ್ಯ ಸರ್ಕಾರ ಎಂಬುದೇ ಇಲ್ಲದಂತಾಗಿದೆ. ಸಚಿವರು ರಸ್ತೆ ವಿಸ್ತರಣೆ ನೆಪದಲ್ಲಿ ಸಾಕಷ್ಟು ಜನರ ನಿದ್ದೆ ಕೆಡಿಸಿದ್ದಾರೆ. ಜನಸಾಮಾನ್ಯರು ಇಲ್ಲಿ ಬದುಕು ನಡೆಸುವುದೇ ಕಷ್ಟವಾಗಿದೆ...

‘ಹಾಸನದ ಎನ್.ಆರ್‌.ಸರ್ಕಲ್‌ನಿಂದ ತಣ್ಣೀರು ಹಳ್ಳದ ತನಕ ಹೆದ್ದಾರಿ ವಿಸ್ತರಣೆ ಸಂಬಂಧ ನಮ್ಮ ಸ್ಥಿರಾಸ್ತಿಗಳಿಗೆ ಹಾನಿಯಾಗದಂತೆ ತಡೆ ಆದೇಶ ನೀಡಬೇಕು’ ಎಂದು ಕೋರಲಾದ ರಿಟ್‌ ಅರ್ಜಿಗಳ ಸಂಬಂಧ ಅರ್ಜಿದಾರರ ಪರ ವಕೀಲರು ಹೈಕೋರ್ಟ್‌ಗೆ ವಿವರಿಸಿದ ರೀತಿ ಇದು.

ಹಾಸನದ ಬಿ.ಎಂ.ರಸ್ತೆ ನಿವಾಸಿ ಎಚ್‌.ಎನ್‌.ರಮೇಶ್‌ ಸೇರಿದಂತೆ 36 ಜನರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್‌.ಪವನಚಂದ್ರ ಶೆಟ್ಟಿ, ‘ರಸ್ತೆ ವಿಸ್ತರಣೆಗೆ ಕೈಗೊಂಡಿರುವ ನಿರ್ಧಾರ ಕರ್ನಾಟಕ ಪೌರಾಡಳಿತ ಕಾಯ್ದೆ–1964ರ ಕಲಂ 87 ಮತ್ತು 91ಕ್ಕೆ ವಿರುದ್ಧವಾಗಿದೆ. ಈ ಅಸಾಂವಿಧಾನಿಕ ನಿರ್ಧಾರದ ಅನುಷ್ಠಾನಕ್ಕೆ ಅವಕಾಶ ಕೊಡಬಾರದು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಹಾಗಾದರೆ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮಕ್ಕೆ ಮುಂದಾಗದಂತೆ ಮೌಖಿಕ ಆದೇಶ ನೀಡುತ್ತೇನೆ’ ಎಂದರು.

ಇದಕ್ಕೆ ಪವನಚಂದ್ರಶೆಟ್ಟಿ, ‘ಈ ರೀತಿ ಮೌಖಿಕ ಆದೇಶವನ್ನು ಹಾಸನ ಜಿಲ್ಲಾಡಳಿತ ಲೆಕ್ಕಕ್ಕೆ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಈಗಾಗಲೇ ಹಲವು ಕೋರ್ಟ್‌ ಆದೇಶಗಳನ್ನೇ ಅವರು ಧಿಕ್ಕರಿಸಿದ್ದಾರೆ. ಲೋಕೋಪಯೋಗಿ ಸಚಿವರ ಮಾತೇ ಅಂತಿಮ ಎಂಬಂತಾಗಿದೆ. ಆದ್ದರಿಂದ ಲಿಖಿತ ಆದೇಶವನ್ನೇ ನೀಡಬೇಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಮುಂದಿನ ವಿಚಾರಣೆವರೆಗೂ ವ್ಯಾಜ್ಯಗ್ರಸ್ತ ಪ್ರದೇಶದಲ್ಲಿ ಯಾವುದೇ ಸ್ಥಿರಾಸ್ತಿ ನೆಲಸಮ ಮಾಡಬಾರದು’ ಎಂದು ಹಾಸನ ನಗರಸಭೆ ಆಯುಕ್ತರಿಗೆ ಆದೇಶಿಸಿದೆ.

ಪ್ರತಿವಾದಿಗಳಾದ ರಾಜ್ಯ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಹಾಸನ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಎಕ್ಸಿಕ್ಯುಟೀವ್‌ ಎಂಜಿನಿಯರ್‌ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಲಾಗಿದೆ.

ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.