
‘ದ್ವೇಷ ಭಾಷಣ ಮಸೂದೆ ಮತ್ತು ನಾಗರಿಕ ಸ್ವಾತಂತ್ರ್ಯ’ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ (ಎಡದಿಂದ) ಪತ್ರಕರ್ತ ರಂಗನಾಥ್ ಭಾರದ್ವಾಜ್, ಹಿರಿಯ ವಕೀಲ ಬಿ. ವಿ ಆಚಾರ್ಯ ಅವರು ಭಾರತಾಂಬೆ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ರಾಜ್ಯ ಸರ್ಕಾರವು ರೂಪಿಸಿರುವ ದ್ವೇಷ ಭಾಷಣ ಮತ್ತು ದ್ವೇಷಾಪರಾಧ ತಡೆ ಮಸೂದೆಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಇಂತಹ ಮಸೂದೆಗೆ ರಾಜ್ಯಪಾಲರು ಸಹಿ ಮಾಡಬಾರದು. ಇದು ಜಾರಿಯಾಗಲೇಬಾರದು’ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಹೇಳಿದರು.
‘ಪ್ರಜಾಪ್ರಭುತ್ವಕ್ಕಾಗಿ ನಾಗರಿಕರು’ ವೇದಿಕೆಯು ಶನಿವಾರ ಆಯೋಜಿಸಿದ್ದ ‘ದ್ವೇಷ ಭಾಷಣ ಮಸೂದೆ ಮತ್ತು ನಾಗರಿಕ ಸ್ವಾತಂತ್ರ್ಯ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಈ ಮಸೂದೆಯ ಪರಿಣಾಮಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ನನಗಿರುವ ಮಾಹಿತಿ ಪ್ರಕಾರ ರಾಜ್ಯಪಾಲರು ಈ ಮಸೂದೆಗೆ ಸಹಿ ಹಾಕಿಲ್ಲ ಮತ್ತು ಅದನ್ನು ರಾಷ್ಟ್ರಪತಿ ಅವರಿಗೆ ಕಳುಹಿಸಲು ಕಾಯ್ದಿರಿಸಿದ್ದಾರೆ. ಮಸೂದೆ ಕುರಿತಾಗಿ ನಾಗರಿಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಬಹುದಾಗಿದ್ದು, ಅವರು ಅವನ್ನು ಪರಿಗಣಿಸುವ ಸಾಧ್ಯತೆಯೂ ಇದೆ’ ಎಂದರು.
‘ಸಮವರ್ತಿ ಪಟ್ಟಿಯಲ್ಲಿರುವ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನು ರೂಪಿಸಿದರೆ, ಕೇಂದ್ರದ ಕಾನೂನೇ ಅನ್ವಯವಾಗುತ್ತದೆ. ರಾಜ್ಯದ ಮಸೂದೆಯು ಜಾರಿಯಾಗಬೇಕಾದರೆ, ರಾಷ್ಟ್ರಪತಿ ಅವರ ಅಂಕಿತ ಅನಿವಾರ್ಯ. ಈ ಕರಾಳ ಮಸೂದೆಯನ್ನು ತಡೆಗಟ್ಟಲು ಜನರು ರಾಷ್ಟ್ರಪತಿಗೂ ಮನವಿ ಸಲ್ಲಿಸಬೇಕು’ ಎಂದು ಕರೆ ನೀಡಿದರು.
ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ವಕೀಲರು, ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಪತ್ರಕರ್ತರು, ದ್ವೇಷ ಭಾಷಣ ಮತ್ತು ದ್ವೇಷಾಪರಾಧ ಅಂದರೆ ಏನು ಎಂಬುದನ್ನು ಮಸೂದೆಯಲ್ಲಿ ಸ್ಪಷ್ಟಪಡಿಸಿಲ್ಲ. ಹೀಗಾಗಿ, ಇದು ಜಾರಿಯಾದರೆ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚು ಎಂದು ಕಳವಳ ವ್ಯಕ್ತಪಡಿಸಿದರು.
ಭಾರತೀಯ ನ್ಯಾಯ ಸಂಹಿತೆಯ 196 ಮತ್ತು 266ನೇ ಸೆಕ್ಷನ್‌ಗಳಲ್ಲಿ ದ್ವೇಷ ಭಾಷಣದಂತಹ ಅಪರಾಧಗಳನ್ನು ವ್ಯಾಖ್ಯಾನಿಸಲಾಗಿದೆ. ಅಂಥದ್ದೇ ಅಪರಾಧಗಳಿಗೆ ಮತ್ತೊಂದು ಕಾನೂನು ಏಕೆ ಬೇಕು?-ವಿವೇಕ್ ಸುಬ್ಬಾರೆಡ್ಡಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ
ಈ ಮಸೂದೆ ಜಾರಿಯಾದರೆ ಪೊಲೀಸರ ಮೇಲೆ ಒತ್ತಡ ಹೆಚ್ಚಲಿದೆ. ದ್ವೇಷ ಭಾಷಣ ಕೃತ್ಯವನ್ನು ಯಾವ ಕಾನೂನಿನಲ್ಲಿ ಪರಿಗಣಿಸಬೇಕು ಮತ್ತು ಪ್ರಕರಣ ದಾಖಲಿಸಬೇಕು ಎಂಬ ಗೊಂದಲವೂ ಸೃಷ್ಟಿಯಾಗಲಿದೆ-ಜ್ಯೋತಿ ಪ್ರಕಾಶ್‌ಮಿರ್ಜಿ ನಿವೃತ್ತ ಐಪಿಎಸ್ ಅಧಿಕಾರಿ
ಈ ಮಸೂದೆಯನ್ನು ಸಿದ್ಧಪಡಿಸುವಾಗ ರಾಜ್ಯ ಸರ್ಕಾರವು ವ್ಯಕ್ತಿ ಸ್ವಾತಂತ್ರ್ಯ ಮತ್ತು ಅದರ ಮಹತ್ವವನ್ನು ಮರೆತಿರುವಂತಿದೆ. ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಿಪಡಿಸಲು ಸಾಧ್ಯವೇ ಇಲ್ಲದಂತ ಸ್ಥಿತಿ ಸರಿಯಲ್ಲ-ಎಂ.ಟಿ.ನಾಣಯ್ಯ ಹಿರಿಯ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.