ADVERTISEMENT

ಪ್ರವಾಹ: ಇತರೆ ಅಭಿವೃದ್ಧಿ ಕಾರ್ಯ ನಿಲ್ಲಿಸಿ ಪರಿಹಾರ; ಬಿಎಸ್‌ವೈ ಭರವಸೆ

ಕೇಂದ್ರಕ್ಕೆ ಇಂದು ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 20:44 IST
Last Updated 31 ಆಗಸ್ಟ್ 2019, 20:44 IST
ಗ್ರಾಮಸ್ಥರಿಂದ ಯಡಿಯೂರಪ್ಪ ಹಾಗೂ ಸಚಿವ ಆರ್.ಅಶೋಕ ಅವರು ಅಹವಾಲು ಸ್ವೀಕರಿಸಿದರು
ಗ್ರಾಮಸ್ಥರಿಂದ ಯಡಿಯೂರಪ್ಪ ಹಾಗೂ ಸಚಿವ ಆರ್.ಅಶೋಕ ಅವರು ಅಹವಾಲು ಸ್ವೀಕರಿಸಿದರು   

ಹಾವೇರಿ: ‘ಪ್ರವಾಹದಿಂದ ರಾಜ್ಯದಲ್ಲಿ ₹32 ಸಾವಿರ ಕೋಟಿ ನಷ್ಟ ಉಂಟಾಗಿದ್ದು, ಬೇರೆ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿಯಾದರೂ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಹಾವೇರಿ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ್ದ ಅವರು, ‘ಕೇಂದ್ರದ ಅಧ್ಯಯನ ತಂಡಗಳು ಈಗಾಗಲೇ ನೆರೆಪ್ರದೇಶಗಳ ಪರಿಶೀಲನೆ ನಡೆಸಿವೆ. ಹಾನಿ ಪ್ರಮಾಣದ ಸಮಗ್ರ ವರದಿ ಕೇಂದ್ರಕ್ಕೆ ಭಾನುವಾರ (ಸೆ.1) ಸಲ್ಲಿಕೆಯಾಗಲಿದೆ. ಹೆಚ್ಚಿನ ಅನುದಾನದ ಸಿಗುವ ನಿರೀಕ್ಷೆ ಇದೆ’ ಎಂದರು.

ರೈತನ ಮಗನಾಗಿ: ‘ನಾನೊಬ್ಬ ರೈತನ ಮಗನಾಗಿ, ಅವರ ನೋವುಗಳನ್ನು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಸಂಕಷ್ಟಗಳನ್ನು ಚೆನ್ನಾಗಿ ಬಲ್ಲೆ. ಯಾವೊಬ್ಬ ಅನ್ನದಾತನಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು’ ಎಂದು ಅಭಯ ನೀಡಿದರು.

ADVERTISEMENT

‘ಮನೆ ಕಳೆದುಕೊಂಡವರಿಗೆ ₹95 ಸಾವಿರ ಪರಿಹಾರ ಕೊಡಲು ಅವಕಾಶವಿದೆ. ಆದರೆ, ಸರ್ಕಾರ ₹ 5 ಲಕ್ಷ ಪರಿಹಾರ ನೀಡಲಿದೆ’ ಎಂದೂ ಹೇಳಿದರು.

‘2009ರಲ್ಲಿ ನೆರೆ ಬಂದಾಗ 250ಕ್ಕೂ ಹೆಚ್ಚು ಗ್ರಾಮಗಳನ್ನು ಸ್ಥಳಾಂತರಿಸಿದ್ದೆವು. ಈಗಲೂ ಜನರ ರಕ್ಷಣೆಗಾಗಿ ಊರುಗಳನ್ನು ಸ್ಥಳಾಂತರಿಸಬೇಕಿದೆ. ಹಾವೇರಿಯಲ್ಲಿ ವರದಾ ನದಿ ಪಾತ್ರದ 26 ಹಳ್ಳಿಗಳನ್ನು ಸ್ಥಳಾಂತರಿಸಿ, 19 ಗ್ರಾಮಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸುವ ಯೋಚನೆ ಇದೆ’ ಎಂದರು.

‘ವಿವಿಧ ಯೋಜನೆಗಳಡಿ ಮನೆ ನಿರ್ಮಿಸುವ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ಸಂತ್ರಸ್ತರಿಗೆ ಮನೆ ಕಟ್ಟಿಸಲು ಆದ್ಯತೆ ನೀಡಿ’ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.