ADVERTISEMENT

ಸಾಲ ಮರುಪಾವತಿ: ವಿಚಾರಣೆಗೆ ಸಹಕರಿಸಲು ರಮೇಶ್‌ ಜಾರಕಿಹೊಳಿಗೆ ಹೈಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 14:43 IST
Last Updated 15 ಮಾರ್ಚ್ 2024, 14:43 IST
ರಮೇಶ್‌ ಜಾರಕಿಹೊಳಿ
ರಮೇಶ್‌ ಜಾರಕಿಹೊಳಿ    

ಬೆಂಗಳೂರು: ‘ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಪಡೆದ ಸಾಲವನ್ನು ಮರುಪಾವತಿ ಮಾಡಿಲ್ಲ‘ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಚಾರಣೆಗೆ ಸಹಕರಿಸಲು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್‌ ಸೂಚಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಸಿಐಡಿ ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆ ಕೋರಿ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಸಲ್ಲಿಸಿರುವ ಅರ್ಜಿಯನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠ’ದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಶುಕ್ರವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್–2 ಬಿ.ಎನ್‌.ಜಗದೀಶ್‌, ‘ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ಸಿಐಡಿ ನೋಟಿಸ್‌ ಜಾರಿಗೊಳಿಸಿದೆ. ಆದರೆ, ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ. ಇದರಿಂದ ಪ್ರಕರಣದ ತನಿಖೆಗೆ ಸ್ಥಗಿತಗೊಂಡಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳು, ಸಿಐಡಿ ವಿಚಾರಣೆಗೆ ಹಾಜರಾಗಿ ತನಿಖೆ ಮುಂದುವರಿಯಲು ಸಹಕರಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ಜತೆಗೆ, ಅರ್ಜಿದಾರರು ವಿಚಾರಣೆಗೆ ಹಾಜರಾದಲ್ಲಿ, ಅವರನ್ನು ಕೋರ್ಟ್‌ ಅನುಮತಿಯಿಲ್ಲದೆ ಬಂಧಿಸಬಾರದು ಎಂದು ಸಿಐಡಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದರು.

ಪ್ರಕರಣವೇನು?:

‘ಗೋಕಾಕ್‌ನಲ್ಲಿರುವ ಸೌಭಾಗ್ಯ ಲಕ್ಷ್ಮಿ ಶುಗರ್ ಲಿಮಿಟೆಡ್‌ನಲ್ಲಿ ಯಂತ್ರೋಪಕರಣ ಅಳವಡಿಕೆ, ವಿಸ್ತರಣೆ ಮತ್ತು ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನಿಂದ 2011ರಿಂದ 2017ರ ಅವಧಿಯಲ್ಲಿ ₹ 232.88 ಕೋಟಿ ಸಾಲ ಪಡೆಯಲಾಗಿತ್ತು. ಸಕಾಲಕ್ಕೆ ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಅಸಲು ಹಾಗೂ ಬಡ್ಡಿ ಸೇರಿ ₹ 439.7 ಕೋಟಿ ಮೊತ್ತವಾಗಿದೆ. ಇದರ ಮರು ಪಾವತಿ ಮಾಡಿಲ್ಲ’ ಎಂಬುದು ಆರೋಪ. ಸಾಲ ಪಡೆಯುವ ವೇಳೆ ಸಕ್ಕರೆ ಕಾರ್ಖಾನೆಗೆ ಜಾರಕಿಹೊಳಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.