ADVERTISEMENT

ಅಂತಿಮ ವರ್ಷದವರಿಗೆ ಪರೀಕ್ಷೆ: ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಉಳಿದ ಸೆಮಿಸ್ಟರ್‌ನವರಿಗೆ ಆಂತರಿಕ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆಯೇ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 19:14 IST
Last Updated 14 ಸೆಪ್ಟೆಂಬರ್ 2020, 19:14 IST

ಬೆಂಗಳೂರು: ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ವರ್ಷ ಅಥವಾ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಪರೀಕ್ಷೆ ನಡೆಸುವ ರಾಜ್ಯಸರ್ಕಾರದ ನಿರ್ಧಾರವನ್ನು ಹೈಕೋರ್ಟ್‌ ಸೋಮವಾರ ಎತ್ತಿ ಹಿಡಿದಿದೆ.

ಅಲ್ಲದೆ, ಉಳಿದ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳಿಗೆ ಅವರು ಹಿಂದಿನ ಪರೀಕ್ಷೆಗಳಲ್ಲಿ ತೆಗೆದ ಅಂಕಗಳ ಆಧಾರದ ಮೇಲೆ ಮುಂದಿನ ತರಗತಿಗೆ ಬಡ್ತಿ ನೀಡುವ ನಿರ್ಧಾರವೂ ಸರಿ ಎಂದು ಹೇಳಿದೆ.

ಪರೀಕ್ಷೆ ನಡೆಸುವ ಅಥವಾ ನಡೆಸದಿರುವ ನಿರ್ಧಾರವನ್ನು ಆಯಾ ವಿಶ್ವವಿದ್ಯಾಲಯಗಳ ತೀರ್ಮಾನಕ್ಕೆ ಬಿಡಬೇಕು ಎಂದು ಕೋರಿ ಎಸ್.ಪಿ. ವೆಂಕಟೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೊರ್ಟ್‌, ‘ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾರ್ಗಸೂಚಿಯ ಅನ್ವಯವೇ ರಾಜ್ಯ ಸರ್ಕಾರ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ’ ಎಂದು ಹೇಳಿತು.

ADVERTISEMENT

‘ಪದವಿ ಅಥವಾ ಸ್ನಾತಕೋತ್ತರ ಪದವಿಯ ಆಂತರಿಕ ಪರೀಕ್ಷೆ ಅಥವಾ ಹಿಂದಿನ ಸೆಮಿಸ್ಟರ್‌ಗಳಲ್ಲಿ ಕಡಿಮೆ ಅಂಕ ತೆಗೆದಿದ್ದ ವಿದ್ಯಾರ್ಥಿ, ಈ ಬಾರಿ ಹೆಚ್ಚಿನ ಅಂಕಗಳನ್ನು ತೆಗೆಯಬಹುದು. ಅನಾರೋಗ್ಯದ ಕಾರಣದಿಂದ ಕಡಿಮೆ ಅಂಕ ಪಡೆದಿದ್ದವರಿಗೂ ಈ ಬಾರಿಯೂ ಅಷ್ಟೇ ಅಂಕಗಳನ್ನು ನೀಡಿದರೆ, ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ’ ಎಂದು ಅರ್ಜಿದಾರರು ಅಭಿಪ್ರಾಯಪಟ್ಟಿದ್ದರು.

‘ತಮ್ಮ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮುಂದೆಯೂ ಅವಕಾಶ ಸಿಗಲಿದೆ. ಕೋವಿಡ್‌ ಸಂದರ್ಭದಲ್ಲಿ ರಾಜ್ಯಸರ್ಕಾರ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ’ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ರವಿ ವಿ. ಹೊಸಮನಿ ಅವರನ್ನು ಒಳಗೊಂಡ ಪೀಠ ಹೇಳಿತು.

ಈ ಕುರಿತು 2020ರ ಜುಲೈ 10ರಂದು ಆದೇಶ ಹೊರಡಿಸಿದ್ದ ಸರ್ಕಾರ, ಅಂತಿಮ ವರ್ಷ ಅಥವಾ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಉಳಿದ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳನ್ನು ಅವರು ಆಂತರಿಕ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ಮುಂದಿನ ತರಗತಿಗೆ ಉತ್ತೀರ್ಣಗೊಳಿಸಬೇಕು ಎಂದು ಹೇಳಿತ್ತು. ಆಂತರಿಕ ಪರೀಕ್ಷೆಯಲ್ಲಿ ತೆಗೆದುಕೊಂಡಿದ್ದ ಅಂಕಗಳ ಪೈಕಿ ಶೇ 50ರಷ್ಟು, ಹಿಂದಿನ ವರ್ಷದ ಪರೀಕ್ಷೆಯಲ್ಲಿ ತೆಗೆದುಕೊಂಡಿದ್ದ ಅಂಕಗಳ ಪೈಕಿ ಶೇ 50ರಷ್ಟು ಅಂಕಗಳನ್ನು ಪರಿಗಣಿಸಿ, ಫಲಿತಾಂಶ ನೀಡಬೇಕು ಎಂದು ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.