ADVERTISEMENT

ಕೊಳೆಗೇರಿ ಕೇಂದ್ರಕ್ಕೆ ಆಕ್ಷೇಪ: ಬಹಿಷ್ಕಾರದ ಮನಃಸ್ಥಿತಿ ಎಂದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 16:01 IST
Last Updated 22 ಸೆಪ್ಟೆಂಬರ್ 2025, 16:01 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ದೇವಸ್ಥಾನದ ಪಕ್ಕದಲ್ಲಿ ಕೊಳೆಗೇರಿ ನಿವಾಸಿಗಳ ಪುನರ್ವಸತಿ ಕೇಂದ್ರ ನಿರ್ಮಿಸಲು ಅವಕಾಶ ನೀಡುವುದರಿಂದ ದೇಗುಲದ ಪಾವಿತ್ರ್ಯ ಮತ್ತು ಪ್ರಶಾಂತ ವಾತಾವರಣಕ್ಕೆ ಧಕ್ಕೆಯಾಗುತ್ತದೆ’ ಎಂಬ ಆಕ್ಷೇಪವೊಂದಕ್ಕೆ ಹೈಕೋರ್ಟ್ ತೀವ್ರ ಆಘಾತ ವ್ಯಕ್ತಪಡಿಸಿದೆ.

ಕೊಳೆಗೇರಿ ನಿವಾಸಿಗಳಿಗೆ ಮನೆ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ, ಮಂಡ್ಯದ ಶ್ರೀ ಕಾಳಿಕಾಂಬ ಸೇವಾ ಸಮಿತಿಯ ಮರು ಪರಿಶೀಲನಾ ಅರ್ಜಿ ಹಾಗೂ ಹೊಸಹಳ್ಳಿಯ ಇಕ್ಕಳಕ್ಕಿ ರಾಮಲಿಂಗೇಗೌಡ ಸೇರಿದಂತೆ ಎಂಟು ಜನ ಭಕ್ತರು ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸಾರಾಸಗಟಾಗಿ ತಿರಸ್ಕರಿಸಿದೆ.

‘ದೇವಸ್ಥಾನದ ಪಕ್ಕದಲ್ಲೇ ಜೋಪಡಿ ಪ್ರದೇಶ ನಿರ್ಮಾಣಗೊಂಡರೆ ಭಕ್ತರ ಧಾರ್ಮಿಕ ಭಾವನೆಗಳು, ಪಾವಿತ್ರ್ಯ ಮತ್ತು ಶಾಂತ ವಾತಾವರಣಕ್ಕೆ ಧಕ್ಕೆ ಉಂಟಾಗುತ್ತದೆ. ಇದು ಸಂವಿಧಾನದ 29ನೇ ವಿಧಿಯ ಉಲ್ಲಂಘನೆಯಾಗುತ್ತದೆ’ ಎಂಬ ಅರ್ಜಿದಾರರ ವಾದವನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ನ್ಯಾಯಪೀಠ, ‘ದೇಗುಲ ಸಮಿತಿಯ ಈ ನಿಲುವು ಜಾತಿ, ವರ್ಗ ಅಥವಾ ಧರ್ಮದ ಮೂಲಕ ಸಮಾಜವನ್ನು ವಿಭಜಿಸುವ ಪ್ರಯತ್ನ. ಅರ್ಜಿದಾರರ ಪೂರ್ವಗ್ರಹ ಮತ್ತು ಬಹಿಷ್ಕಾರದ ಮನಃಸ್ಥಿತಿಗೆ ತಾಜಾ ನಿದರ್ಶನ’ ಎಂದು ತೀಕ್ಷ್ಣ ಪದಗಳಲ್ಲಿ ಖಂಡಿಸಿದೆ.

ADVERTISEMENT

‘ಈ ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿಲ್ಲ. ಅರ್ಜಿದಾರರು ಧಾರ್ಮಿಕ ಅಲ್ಪಸಂಖ್ಯಾತರೂ ಅಲ್ಲ. ಆದ್ದರಿಂದ, ಸಂವಿಧಾನದ 29ನೇ ವಿಧಿಯ ಅಡಿಯಲ್ಲಿ ಹಕ್ಕು ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಲು ಸಾಧ್ಯವಿಲ್ಲ. ಏಕೆಂದರೆ 29ನೇ ವಿಧಿಯ ಉಲ್ಲಂಘನೆಯು ಘೋಷಿತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮಾತ್ರವೇ ಅನ್ವಯಿಸುತ್ತದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಭಾರತ ದೇಶವನ್ನು ಉನ್ನತ ದೇಶವನ್ನಾಗಿ ನೋಡಬೇಕೆಂದಿದ್ದರೆ, ಅದು ತನ್ನ ನಾಗರಿಕರನ್ನು ಎರಡನೇ ದರ್ಜೆಗೆ ಇಳಿಸಿ ನೋಡಲು ಸಾಧ್ಯವಿಲ್ಲ. ಜೋಪಡಿ ನಿವಾಸಿಗಳ ಘನತೆ ಯಾವುದೇ ಭಕ್ತರ ಘನತೆಗಿಂತ ಕೀಳಾಗಿಲ್ಲ. ದೇಶದಲ್ಲಿ ಒಬ್ಬರ ಹಕ್ಕನ್ನು ಉಳಿಸಲಿಕ್ಕಾಗಿ ಇನ್ನೊಬ್ಬರ ಹಕ್ಕನ್ನು ಅಡಗಿಸುವ ಅಗತ್ಯವಿಲ್ಲ. ನಮ್ಮ ದೇಶದ ಸಂವಿಧಾನಕ್ಕೆ ಮಾನವನ ಮೌಲ್ಯಾಧಾರಿತ ವರ್ಗ ಶ್ರೇಣಿಯಿಲ್ಲ. ಅದರ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ’ ಎಂದು ಗಟ್ಟಿಯಾದ ಧ್ವನಿಯಲ್ಲಿ ಪ್ರತಿಪಾದಿಸಿದೆ.

ಸುದೀರ್ಘ ವ್ಯಾಜ್ಯದ ನಂತರ ಮಂಡ್ಯದ ಸರ್ವೇ ನಂ 843 ಮತ್ತು 844ರಲ್ಲಿ ಒಟ್ಟು 28½ ಗುಂಟೆ ಭೂಮಿಯನ್ನು ಕಾಯ್ದೆಯ ಕಲಂ 3ರ ಅಡಿಯಲ್ಲಿ ಮರು-ಜೋಪಡಿ ಪ್ರದೇಶವೆಂದು ಘೋಷಿಸಿ, ಆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿ ಜೋಪಡಿ ವಾಸಿಗಳಿಗೆ ಪುನರ್ವಸತಿ ಕಲ್ಪಿಸುವಂತೆ ಆದೇಶ ಹೊರಡಿಸಲಾಗಿತ್ತು. ಈ ಕುರಿತಂತೆ ಜಿಲ್ಲಾಧಿಕಾರಿ 2018ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದರು. ರಾಜ್ಯ ಸರ್ಕಾರದ ಪರ ರಾಹುಲ್‌ ಕಾರ್ಯಪ್ಪ ಮತ್ತು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಪರ ಹೈಕೋರ್ಟ್‌ ವಕೀಲ ಎಂ.ಪಿ.ಶ್ರೀಕಾಂತ್‌ ವಾದ ಮಂಡಿಸಿದ್ದರು.

ಆಶ್ಚರ್ಯದ ಸಂಗತಿಯೆಂದರೆ ದೇವಾಲಯ ಸಮಿತಿಯು ಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿಲ್ಲ. ಅಧಿಸೂಚನೆಯನ್ನು ಭಕ್ತರು ಪ್ರಶ್ನಿಸಿದ್ದಾರೆ. ದೇವಸ್ಥಾನ ಸಮಿತಿಯು ಭಕ್ತರನ್ನು ಮುಂದಿಟ್ಟುಕೊಂಡು ತನ್ನ ಉದ್ದೇಶ ಈಡೇರಿಸಿಕೊಳ್ಳಲು ಬಯಸುತ್ತಿದೆ.
ನ್ಯಾ.ಎಂ.ನಾಗಪ್ರಸನ್ನ

ಜೋಪಡಿ ವಾಸಿಗಳು ಕೆಳಮಟ್ಟದವರೇ?

‘ಅರ್ಜಿದಾರರ ವಾದದ ಹಿಂದಿರುವ ಅರ್ಥವನ್ನು ಗಮನಿಸಿದರೆ ಜೋಪಡಿ ವಾಸಿಗಳು ಕೆಳಮಟ್ಟದ ವ್ಯಕ್ತಿಗಳು ಭಕ್ತಿ ತೋರಿಸುವ ಪೂಜಾ ಸ್ಥಳದಲ್ಲಿ ವಾಸಿಸುವ ಹಕ್ಕಿನಿಂದ ವಂಚಿತರಾದವರು ಎಂದೇ ಆಗಿದೆ. ಇಂತಹ ಮಾತುಗಳು ಈ ಪ್ರಬುದ್ಧ ಯುಗದಲ್ಲಿ ಅತ್ಯಂತ ಭೀಕರವಾಗಿ ಕಾಣುತ್ತವೆ. ದೇವಾಲಯ ಸಮಿತಿಯ ಎಲ್ಲ ವಾದಾಂಶಗಳು ಗಾಢವಾದ ನೋವುಂಟು ಮಾಡಿವೆ’ ಎಂದು ನ್ಯಾಯಪೀಠ ವ್ಯಥೆ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.