ADVERTISEMENT

ಪ್ರಧಾನಿಗೆ ಅಹಂ ಒಳ್ಳೆಯದಲ್ಲ: ಮೋದಿ ವಿರುದ್ಧ ದೇವೇಗೌಡ ಪರೋಕ್ಷ ವಾಗ್ದಾಳಿ

‘ವಾಜಪೇಯಿ, ಇಂದಿರಾ ಸರ್ಕಾರ ಯುದ್ಧ ಗೆದ್ದಿಲ್ಲವೇ?’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 14:14 IST
Last Updated 5 ಮಾರ್ಚ್ 2019, 14:14 IST
ಎಚ್‌.ಡಿ. ದೇವೇಗೌಡ
ಎಚ್‌.ಡಿ. ದೇವೇಗೌಡ   

ಬೆಂಗಳೂರು: ಪ್ರಧಾನಿ ಹುದ್ದೆಯಲ್ಲಿರುವವರಿಗೆ ಅಹಂಕಾರ ಒಳ್ಳೆಯದಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಪ್ರಜಾವಾಣಿ ಕಚೇರಿಯಲ್ಲಿ ಮಂಗಳವಾರ ನಡೆದ ‘ಪ್ರಜಾ ಮತ 2019’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಪ್ರಧಾನಿ ತಮ್ಮ ಸ್ಥಾನಕ್ಕೆ ತಕ್ಕ ಪದಗಳನ್ನು ಪ್ರಯೋಗಿಸಬೇಕು. ನರೇಂದ್ರ ಮೋದಿಯವರು ಕೊಂಕು ಮಾತುಗಳನ್ನು ಆಡಬಾರದು. ಇದರಿಂದ ಆ ಸ್ಥಾನದ ಗೌರವ ಕುಸಿಯುತ್ತದೆ ಎಂದು ದೇವೇಗೌಡರು ಹೇಳಿದರು.

ADVERTISEMENT

‘ಅಭಿವೃದ್ಧಿಗೆ ಸುಸ್ಥಿರ ಸರ್ಕಾರವೇ ಬೇಕೆಂದಿಲ್ಲ’

ದೇಶದ ಅಭಿವೃದ್ಧಿಗೆ ಸುಸ್ಥಿರ ಸರ್ಕಾರ ಬೇಕು ಅನ್ನುವ ವಾದವಿದೆ. ಇದು ಮೋದಿಯವರ ಪೀಠಿಕೆ. ಇದು ಬಹಳ ಹಳೆಯ ವಾದ. ಸುಸ್ಥಿರ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿಯಾಗುತ್ತದೆ, ದೇಶದ ಆರ್ಥಿಕತೆ ನಾಗಾಲೋಟದಲ್ಲಿ ಸಾಗುತ್ತದೆ ಎನ್ನುತ್ತಾರೆ. ಆದರೆ, ನನ್ನ ಸರ್ಕಾರ ಏನೂ ಮಾಡಿಲ್ಲವೇ? ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ ಅವರ ಸರ್ಕಾರ ಯುದ್ಧಗಳನ್ನು ಗೆದ್ದಿಲ್ಲವೇ ಎಂದು ಗೌಡರು ಪ್ರಶ್ನಿಸಿದರು.

ವಾಜಪೇಯಿ ಅವರು 21 ಪಕ್ಷಗಳನ್ನು ಸೇರಿಸಿ ಸರ್ಕಾರ ನಡೆಸಿದ್ದರು ಎಂಬುದನ್ನೂ ಅವರು ಜ್ಞಾಪಿಸಿದರು. ‘ವಿಫಲ ಯೋಜನೆಗಳ ಸರದಾರ’ ಮೋದಿಯವರ ನೋಟು ರದ್ದು ವಿಫಲವಾಯ್ತು. ಈಗ ನಗದುರಹಿತ ಸೊಸೈಟಿ ಎನ್ನುತ್ತಿದ್ದಾರೆ. ಅದರಿಂದ ಏನು ಪ್ರಯೋಜನವಾಯಿತೋ ತಿಳಿದಿಲ್ಲ. ಸ್ವಚ್ಛ ಭಾರತ ಯೋಜನೆಯೇನು ಹೊಸದೇ? ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳೆಲ್ಲ ಮೊದಲಿನಿಂದಲೂ ಇರಲಿಲ್ಲವೇ? ನರಸಿಂಹರಾವ್ ಪ್ರಧಾನಿಯಾಗಿದ್ದಾಗ 6000 ಕಿ.ಮೀ. ಬ್ರಾಡ್‌ಗೇಜ್‌ ಮಾಡಿದ್ದರು. ಆದರೆ, ಮೋದಿ ಮಾತ್ರ ಎಲ್ಲ ನಾನೊಬ್ಬನೇ ಮಾಡಿದ್ದು ಎನ್ನುತ್ತಾರೆ ಎಂದು ಗೌಡರು ಟೀಕಿಸಿದರು.

‘ಕಾಶ್ಮೀರದಲ್ಲಿ ಮೂಲಸೌಕರ್ಯ ಕಲ್ಪಿಸಿದ್ದೆ’

ಕಾಶ್ಮೀರಕ್ಕೆ 10 ವರ್ಷ ಯಾವುದೇ ಪ್ರಧಾನಿ ಹೋಗಿರಲಿಲ್ಲ. ನನಗೂ ಹೋಗಬಾರದು ಅಂತ ರಾ ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದರು. ಆದರೂ ನಾನು ಐದು ಸಲ ಹೋಗಿದ್ದೆ. ಉರಿಯಲ್ಲಿ ವಿದ್ಯುತ್ ಘಟಕ ಶುರು ಮಾಡಿದ್ದೆವು. ಕಾಶ್ಮೀರದಲ್ಲಿ ವಿಶ್ವವಿದ್ಯಾಲಯ, ರೈಲ್ವೆ ಲೈನ್‌ ಆರಂಭಿಸಿದೆ. ಕಾಶ್ಮೀರಕ್ಕೆ ಪ್ರವಾಸಿಗರು ಬರುತ್ತಿರಲಿಲ್ಲ. ಅಲ್ಲಿನ ವ್ಯಾಪಾರಿಗಳ ಪರಿಸ್ಥಿತಿ ಕಂಡು ಸಾಲಮನ್ನಾ ಮಾಡಿದೆ. ಯಾವ ಹುರಿಯತ್ ನಾಯಕರೂ ನನ್ನ ಬಳಿಗೆ ಬರಲಿಲ್ಲ. ಆದರೆ ನಾನೇ ಎಲ್ಲವನ್ನೂ ಮಾಡಿದ್ದೆ. ಕಾಶ್ಮೀರದ ರಸೋಯಿಯಲ್ಲಿ ನಾನು ಮಿಲಿಟರಿ ಓಪನ್ ಜೀಪ್‌ನಲ್ಲಿ ಒಂದು ಕಿಲೋಮೀಟರ್ ಹೋಗಿದ್ದೆ. ನಾನು ಅನ್ನೋದು ಪ್ರಧಾನಿಗೆ ಬರಬಾರದು. ಜನರು ಕೊಟ್ಟ ಸ್ಥಾನದಲ್ಲಿ ಕುಳಿತು ಜನರಿಗೆ ಕಿಂಚಿತ್ತು ಏನಾದರೂ ಮಾಡಬೇಕು ಅನ್ನೋದು ಇರಬೇಕು. ಈಶಾನ್ಯ ಭಾರತದಲ್ಲಿಯೂ ಅನೇಕ ಹೆದ್ದಾರಿ, ರೈಲ್ವೆ ಲೈನ್ ಮಂಜೂರು ಮಾಡಿದ್ದೆ. ಅಭಿವೃದ್ಧಿಗೆ ಗಮನ ಕೊಟ್ಟಿದ್ದೆ ಎಂದು ದೇವೇಗೌಡರು ಹೇಳಿದರು.

ಮೋದಿ ವಿದೇಶ ಪ್ರಯಾಣಕ್ಕೂ ಟೀಕೆ

ಮೋದಿ ಅವರ ವಿದೇಶ ಪ್ರಯಾಣದ ಬಗ್ಗೆಯೂ ದೇವೇಗೌಡರು ಪರೋಕ್ಷವಾಗಿ ಟೀಕಿಸಿದರು.

‘ನಾನು ಬೇರೆ ದೇಶಕ್ಕೆ ಹೋಗಬೇಕೆಂದು ಹಂಬಲ ಪಟ್ಟಿಲ್ಲ. ನನ್ನ ದೇಶದ ಸಮಸ್ಯೆಯನ್ನು ತಿಳಿಯಲು ಪ್ರಯತ್ನಿಸಿದೆ. ವಿದೇಶಗಳಿಗೆ ಭೇಟಿ ನೀಡಿದ್ದಾಗಲೂ ನಮ್ಮ ದೇಶದ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಿದೆ. ನನಗೆ ಮಾಧ್ಯಮಗಳನ್ನು ಮ್ಯಾನೇಜ್ ಮಾಡಲು ಬರಲಿಲ್ಲ, ತಮಟೆ ಹೊಡಿಯಲಿಲ್ಲ ಅಷ್ಟೇ. ಈಗ ನಮ್ಮ ದೃಶ್ಯ ಮಾಧ್ಯಮಗಳೂ ಮೋದಿ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿವೆ. ಅದರಲ್ಲಿ ಏನೂ ತಪ್ಪಿಲ್ಲ’ ಎಂದು ಅವರು ಹೇಳಿದರು. ಇತರ ಯಾವ ಪ್ರಧಾನಿಯೂ ಮೋದಿಯಂತೆ ಅಬ್ಬರದ ಪ್ರಚಾರ ಮಾಡಿರಲಿಲ್ಲ. ತಾಂತ್ರಿಕವಾಗಿ ಬಿಜೆಪಿ ಮುಂದಿದೆ. ಪ್ರಧಾನಿಯ ಭಾಷಣವನ್ನು ಎಲ್ಲೆಡೆಗೆ ತಲುಪಿಸಲು ಶಕ್ತವಾಗಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.