ADVERTISEMENT

ಎಚ್‌.ಡಿ.ದೇವೇಗೌಡರದು ಕರ್ಣನ ವ್ಯಕ್ತಿತ್ವ: ಬಸವರಾಜ ಬೊಮ್ಮಾಯಿ ಬಣ್ಣನೆ

ರಾಮಲಿಂಗ ಶೆಟ್ಟಿ ಅವರ ‘ಮಣ್ಣಿನ ಮಗ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 19:51 IST
Last Updated 1 ಮಾರ್ಚ್ 2024, 19:51 IST
ಕಾರ್ಯಕ್ರಮದಲ್ಲಿ ‘ಮಣ್ಣಿನ ಮಗ’ ಪುಸ್ತಕದ ಪ್ರತಿಯನ್ನು ನಿರ್ಮಲಾನಂದನಾಥ ಸ್ವಾಮೀಜಿ ಅವರು ನೇ.ಭ. ರಾಮಲಿಂಗ ಶೆಟ್ಟಿ (ಬಲ ಬದಿ) ಅವರಿಗೆ ಹಸ್ತಾಂತರಿಸಿದರು. (ಎಡದಿಂದ) ಸಾಹಿತಿ ಹಂ.ಪ. ನಾಗರಾಜಯ್ಯ, ಬಸವರಾಜ ಬೊಮ್ಮಾಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹಾಗೂ ಬಿ.ಆರ್. ಸುದರ್ಶನ್ ಪಾಲ್ಗೊಂಡಿದ್ದರು – ಪ್ರಜಾವಾಣಿ ವಾರ್ತೆ
ಕಾರ್ಯಕ್ರಮದಲ್ಲಿ ‘ಮಣ್ಣಿನ ಮಗ’ ಪುಸ್ತಕದ ಪ್ರತಿಯನ್ನು ನಿರ್ಮಲಾನಂದನಾಥ ಸ್ವಾಮೀಜಿ ಅವರು ನೇ.ಭ. ರಾಮಲಿಂಗ ಶೆಟ್ಟಿ (ಬಲ ಬದಿ) ಅವರಿಗೆ ಹಸ್ತಾಂತರಿಸಿದರು. (ಎಡದಿಂದ) ಸಾಹಿತಿ ಹಂ.ಪ. ನಾಗರಾಜಯ್ಯ, ಬಸವರಾಜ ಬೊಮ್ಮಾಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹಾಗೂ ಬಿ.ಆರ್. ಸುದರ್ಶನ್ ಪಾಲ್ಗೊಂಡಿದ್ದರು – ಪ್ರಜಾವಾಣಿ ವಾರ್ತೆ   

ಬೆಂಗಳೂರು: ‘ದೇವೇಗೌಡರದು ಕರ್ಣನ ವ್ಯಕ್ತಿತ್ವವಾಗಿದ್ದು, ಅವರು 60 ವರ್ಷದ ರಾಜಕಾರಣದಲ್ಲಿ ಐದಾರು ವರ್ಷ ಮಾತ್ರ ಅಧಿಕಾರ ಮಾಡಿದ್ದಾರೆ. ಉಳಿದ ಅವಧಿಯಲ್ಲಿ ದೇಶ, ರಾಜ್ಯದ ಹಿತಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದಾರೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೇ.ಭ. ರಾಮಲಿಂಗ ಶೆಟ್ಟಿ ಅವರ ‘ಮಣ್ಣಿನ ಮಗ’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು.

‘ಮಹಾಭಾರತದ ಕೃಷ್ಣನ ಲೀಲೆಯಲ್ಲಿ ಅರ್ಜುನ ಮತ್ತು ಕರ್ಣನ ವ್ಯಕ್ತಿತ್ವಗಳು ಹೊರಹೊಮ್ಮುತ್ತವೆ. ಅರ್ಜುನ ಕಾರ್ಯಪ್ರವೃತನಾಗಲು ಧೀರ, ಶೂರನೆಂದು ಹೊಗಳಬೇಕಾಗುತ್ತದೆ. ಆದರೆ, ಕರ್ಣ ಇದಕ್ಕೆ ಅಪವಾಧವಾಗಿದ್ದು, ಗುರಿಯನ್ನು ಸವಾಲಾಗಿ ಸ್ವೀಕರಿಸಿ ಕಾರ್ಯೋನ್ಮುಖನಾಗುತ್ತಾನೆ. ದೇವೇಗೌಡ ಅವರದ್ದೂ ಅದೇ ರೀತಿಯ ವ್ಯಕ್ತಿತ್ವವಾಗಿದೆ. ನನಗೆ ಅವರ ಜತೆಗೆ ಬಹಳ ಹತ್ತಿರದಿಂದ ಕೆಲಸ ಮಾಡುವ ಅವಕಾಶ ಸಿಕ್ಕಿತು’ ಎಂದು ಹೇಳಿದರು. 

ADVERTISEMENT

‘ರಾಜ್ಯದ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ದೇವೇಗೌಡರ ಪಾತ್ರ ದೊಡ್ಡದು. ಕನ್ನಡದ ಬಾವುಟವನ್ನು ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿಸಿದ ಏಕೈಕ ಕನ್ನಡಿಗ ಅವರಾಗಿದ್ದು, ಅವರ ಬಗ್ಗೆ ಹೆಮ್ಮೆ ಇದೆ. ‌ಅವರು ಸಂಬಂಧಗಳನ್ನು ರಾಜ್ಯದ ಹಿತಕ್ಕೆ ಬಳಸಿಕೊಳ್ಳುತ್ತಿದ್ದರು. ರಾಜಕೀಯವಾಗಿ ಅವರಿಂದ ಬಹಳಷ್ಟು ಕಲಿತಿದ್ದೇನೆ’ ಎಂದು ತಿಳಿಸಿದರು. 

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ‘ದೇವೇಗೌಡ ಅವರು ಕಡಿಮೆ ಅವಧಿಯಲ್ಲಿ ಅಧಿಕಾರದಲ್ಲಿ ಇದ್ದರೂ ನಾಡಿಗೆ ಕೊಟ್ಟ ಕೊಡುಗೆ ಅಪಾರ. ಆದರ್ಶಗಳ ಕೊರತೆ ಕಾಣುತ್ತಿರುವ ಈ ಕಾಲದಲ್ಲಿ ರಾಜಕಾರಣಕ್ಕೆ ಬರುವವರು ದೇವೇಗೌಡರನ್ನು ಅಧ್ಯಯನ ಮಾಡಬೇಕು. ಅವರಿಗೆ ವಯಸ್ಸಾದರೂ ಅವರ ಶಕ್ತಿ ಕುಂದಿಲ್ಲ. ಅವರ ಮನಸ್ಸು ದೇಹವನ್ನು ಮುನ್ನಡೆಸುತ್ತಿದೆ’ ಎಂದು ಹೇಳಿದರು.  

ಕಾಂಗ್ರೆಸ್ ಮುಖಂಡ ವಿ.ಆರ್. ಸುದರ್ಶನ್, ‘ಜನತಾ ಪರಿವಾರದಲ್ಲಿ ‍ಪ್ರತಿಭಾವಂತ ನಾಯಕರು ಇದ್ದರು. ಅವರು ರಾಜ್ಯದ ಬಗ್ಗೆ ಕನಸು ಹಾಗೂ ದೂರದೃಷ್ಟಿ ಹೊಂದಿದ್ದರು. ಆದರೆ, ಪಕ್ಷವನ್ನು ಕಟ್ಟಿದವರೇ ಕೆಡವಿದರು. ಇವತ್ತಿನ ರಾಜಕಾರಣದಲ್ಲಿ ದೇವೇಗೌಡ ಅವರು ಇಲ್ಲಿ ತೆಗೆದುಕೊಂಡ ನಿರ್ಧಾರವನ್ನು ಪ್ರಧಾನಿಯಾಗಿದ್ದಾಗ ತೆಗೆದುಕೊಂಡಿದ್ದರೆ ಇನ್ನೂ ಎರಡು ವರ್ಷ ಪ್ರಧಾನಿಯಾಗಿ ಇರುತ್ತಿದ್ದರು’ ಎಂದು ತಿಳಿಸಿದರು. 

ಪುಸ್ತಕ ಪರಿಚಯ  ಪುಸ್ತಕ: ‘ಮಣ್ಣಿನ ಮಗ’ ಲೇಖಕ: ನೇ.ಭ. ರಾಮಲಿಂಗ ಶೆಟ್ಟಿ ಪುಟಗಳು: 344 ಬೆಲೆ: ₹ 390 ಪ್ರಕಾಶನ: ಸ್ನೇಹ ಬುಕ್ ಹೌಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.