ADVERTISEMENT

ಸರ್ಕಾರ ಉಳಿಸಲು ಸರ್ವರ ಯತ್ನ: ದೇವೇಗೌಡ

ಅಲ್ತಾಫ್‌ ಖಾನ್‌ ಹೇಳಿಕೆ: ಕಾರ್ಯಕರ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:00 IST
Last Updated 3 ಜುಲೈ 2019, 20:00 IST
   

ಬೆಂಗಳೂರು: ‘ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ.ಕುಮಾರಸ್ವಾಮಿ ಅಮೆರಿಕದಲ್ಲಿ ಇದ್ದುಕೊಂಡು ಎಲ್ಲರನ್ನೂ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ.ಸಿದ್ದರಾಮಯ್ಯ, ಪರಮೇಶ್ವರ ಕೂಡಾ ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಇಲ್ಲಿ ಬುಧವಾರ ಪಕ್ಷದ ಅಲ್ಪಸಂಖ್ಯಾತ ನಾಯಕರು, ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದ ಅವರು, ‘ಪಿರಿಯಾಪಟ್ಟಣ ಶಾಸಕ ಮಹದೇವ್ ಅವರುರಮೇಶ ಜಾರಕಿಹೊಳಿ ಮುಖ್ಯಮಂತ್ರಿ ಬಳಿ ₹ 80 ಕೋಟಿ ಬೇಡಿಕೆ ಇಟ್ಟಿದ್ದರು ಎಂಬ ವಿಚಾರದ ಬಗ್ಗೆ ನನ್ನಲ್ಲಿ ಏನನ್ನೂ ಕೇಳಬೇಡಿ, ಇಂತಹದ್ದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

‘ದೆಹಲಿಯಲ್ಲಿ ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಅವರು ನಮ್ಮ ಪಕ್ಷ ಬಿಟ್ಟು ಹೋಗುವುದಿಲ್ಲ ಅಂದುಕೊಂಡಿದ್ದೇನೆ’ ಎಂದರು.

ADVERTISEMENT

‘ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರಿಂದ ಮನಸ್ಸಿಗೆ ನೋವಾಗಿದೆ. ಅವರು ಸಾಕಷ್ಟು ಹೋರಾಟ ಕೂಡಾ ಮಾಡಿದ್ದಾರೆ. ನೆರೆಯ ದೇಶದಿಂದ ಅಪಾಯ ಆಗಬಹುದು ಎಂದು ಜನ ಭಾವಿಸಿ ಬಿಜೆಪಿಗೆ ಮತ ಹಾಕಿದರು. ಕಾಂಗ್ರೆಸ್‌ ಹಿನ್ನಡೆಗೆ ರಾಹುಲ್ ಕಾರಣ ಅಲ್ಲ, ಬದಲಿಗೆ ಸನ್ನಿವೇಶ ಕಾರಣ. ಆದರೆ ಯಾರನ್ನೇ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದರೂಪಕ್ಷದ ಜವಾಬ್ದಾರಿ ರಾಹುಲ್ ವಹಿಸಬೇಕಾಗುತ್ತದೆ. ಅವರು ಯುವಕರಿದ್ದಾರೆ’ ಎಂದು ಹೇಳಿದರು.

ಜಟಾಪಟಿ:ಸಭೆಯಲ್ಲಿ ಚಾಮರಾಜಪೇಟೆ ಪರಾಜಿತ ಅಭ್ಯರ್ಥಿ ಅಲ್ತಾಫ್ ಖಾನ್ ಭಾಷಣ ಮಾಡುವಾಗ ವಾಗ್ವಾದ ಆರಂಭವಾಯಿತು. ‘ಲೋಕಸಭೆ ಚುನಾವಣೆಯಲ್ಲಿ ನಮ್ಮವರೇ ಕಾಂಗ್ರೆಸ್‌ಗೆ ಮತ ಹಾಕಿಲ್ಲ. ಹಾಗಾಗಿಯೇ ಕಾಂಗ್ರೆಸ್‌ ಅಭ್ಯರ್ಥಿ ಸೋತರು. ಚಾಮರಾಜಪೇಟೆ ಕ್ಷೇತ್ರದಲ್ಲಿ ನಮ್ಮವರೇ ಕಾಂಗ್ರೆಸ್ ಪರವಾಗಿ ನಿಂತಿಲ್ಲ’ ಎಂದು ಅಲ್ತಾಫ್‌ ಹೇಳುತ್ತಿದ್ದಂತೆಯೇ ಹಲವು ಕಾರ್ಯಕರ್ತರು ಆಕ್ಷೇಪಿಸಿದರು.ಅಲ್ತಾಫ್‌ಗೆ ಕುಳಿತುಕೊಳ್ಳುವಂತೆ ವೇದಿಕೆಯಲ್ಲಿದ್ದವರು ಸೂಚಿಸಿದರು. ಅವರು ಕುಳಿತುಕೊಳ್ಳುವವರೆಗೂ ಕಾರ್ಯಕರ್ತರು ಪಟ್ಟು ಬಿಡಲಿಲ್ಲ.ದೇವೇಗೌಡರು ಮೌನವಾಗಿ ಇದನ್ನು ನೋಡುತ್ತ ಇದ್ದರು.ಮಧು ಬಂಗಾರಪ್ಪ, ಎನ್.ಎಚ್‌.ಕೋನರಡ್ಡಿ, ಜಫ್ರುಲ್ಲಾ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.