ADVERTISEMENT

ಕುಮಾರಸ್ವಾಮಿಗೆ ಜೆಡಿಎಸ್‌ನ ಭವಿಷ್ಯದ ನಡೆಯ ಹೊಣೆ: ಎಚ್‌.ಡಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 11:41 IST
Last Updated 26 ಡಿಸೆಂಬರ್ 2020, 11:41 IST
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ   

ಬೆಂಗಳೂರು: ‘ಜ. 7ರಂದು ನಡೆಯಲಿರುವ ‍ಪಕ್ಷದ ನಾಯಕರ ಸಭೆಯಲ್ಲಿ ಪಕ್ಷದ ಭವಿಷ್ಯದ ನಡೆಯ ಬಗ್ಗೆ ತಮ್ಮ ಚಿಂತನೆಗಳನ್ನು ಎಚ್‌.ಡಿ. ಕುಮಾರಸ್ವಾಮಿ ಹಂಚಿಕೊಳ್ಳಲಿದ್ದಾರೆ. ಸಂಕ್ರಾಂತಿ (ಜ. 14) ಬಳಿಕ ಕುಮಾರಸ್ವಾಮಿ ನಿರ್ದೇಶನದಂತೆ ಪಕ್ಷ ಸಂಘಟನೆ ನಡೆಯಲಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಆ ಮೂಲಕ, ರಾಜ್ಯದಲ್ಲಿ ಜೆಡಿಎಸ್‌ ಮುನ್ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಮತ್ತೆ ಕುಮಾರಸ್ವಾಮಿ ವಹಿಸಿಕೊಳ್ಳಲಿದ್ದಾರೆ ಎಂದು ಅವರು ಸೂಚ್ಯವಾಗಿ ಹೇಳಿದರು. ‘ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ, ನಮಗೆ ಯಾವ ಹೈಕಮಾಂಡೂ ಇಲ್ಲ. ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗಲು ಸಾಧ್ಯವಿಲ್ಲ. ವಯಸ್ಸಿಗೆ ತಕ್ಕಂತೆ ನನ್ನ ಕೆಲಸ ಮಾಡುತ್ತೇನೆ’ ಎಂದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಜೆಡಿಎಸ್ ಮನೆ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ರೀತಿ ಮಾತನಾಡಿ ಯಾವಾಗ್ಯಾವಾಗ ಯಾರು ಯಾರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎಂದು ಗೊತ್ತಿದೆ. ಸಿದ್ದು, ಖರ್ಗೆ, ಮುನಿಯಪ್ಪ, ಗುಲಾಂ ನಬಿ ಎಲ್ಲರೂ ಬಂದಿದ್ದು ಏಕೆ’ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ADVERTISEMENT

‘ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ಹಾಗೆಂದು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಯಾರು ಏನೇ ಮಾಡಿದರೂ ತೆನೆ ಹೊತ್ತ ಮಹಿಳೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ದೇವೇಗೌಡ, ಕುಮಾರಸ್ವಾಮಿ ಹೊರತಾಗಿಯೂ ಪಕ್ಷದಲ್ಲಿ ಸಾಕಷ್ಟು ನಾಯಕರಿದ್ದಾರೆ. ಪಕ್ಷ ಯಾರೊಬ್ಬರನ್ನೂ ನೆಚ್ಚಿಕೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಕಾಂಗ್ರೆಸ್ ಬಗ್ಗೆ ಮಾತಾಡಿದರೆ ತುಂಬಾ ಮಾತಾಡ್ತೇನೆ. ಕಾಂಗ್ರೆಸ್ ಬಗ್ಗೆ ನನಗೆ ಗೊತ್ತಿದೆ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ. ಜೆಡಿಎಸ್ಗೆ ಯಾರಿಂದ ಏನೂ ಮಾಡೋಕೆ ಆಗಲ್ಲ. ಹಾಲು, ಅಕ್ಕಿ ಭಾಗ್ಯ ಹೀಗೆ ಭಾಗ್ಯಗಳನ್ನು ಕೊಟ್ಟು ಏನಾಯಿತು. ಹಾಗಾದರೆ 130 ಸೀಟು ಇದ್ದದ್ದೂ 78ಕ್ಕೆ ಏಕೆ ಬಂತು. ಹಾಸನದಲ್ಲಿ ಈಗ ಕಾಂಗ್ರೆಸ್ ಏನಾಗಿದೆ. ಒಂದು ನಗರಸಭೆ ಚುನಾವಣೆ ಗೆಲ್ಲಲು ಆಗಲಿಲ್ಲ. ಇದು ಆನಂದವಾ ನಿಮಗೆ (ಕಾಂಗ್ರೆಸ್‌ಗೆ). ಎಲ್ಲದಕ್ಕೂ ತೆರೆ ಎಳೆಯುತ್ತಿದ್ದೇನೆ’ ಎಂದೂ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ವಿಧಾನ ಪರಿಷತ್‌ನಲ್ಲಿ ನಡೆದ ಗದ್ದಲದ ಬಗ್ಗೆ ಮಾತನಾಡಿದ ಅವರು, ‘ಸಭಾಪತಿ ರಾಜೀನಾಮೆ ಕೊಡಲು ಸಿದ್ದವಿದ್ದರು. ಆದರೆ, ಅವರ ಪಕ್ಷದವರೇ ಕೊಡಬೇಡಿ ಎಂದು ಹೇಳಿದ್ದಾರೆ. ಏಕೆಂದರೆ ನನ್ನನ್ನು ಪರೀಕ್ಷೆ ಮಾಡಬೇಕು ಅಂತೆ. ನನ್ನ ಜಾತ್ಯತೀತತೆ ಪರೀಕ್ಷೆ ಮಾಡಬೇಕಾ ನೀವು. ಗೋದ್ರಾ ಘಟನೆ ನಡೆದಾಗ ನಾನು ಗುಜರಾತ್‌ಗೆ ಹೋಗಿದ್ದೆ. ಯಾರು ಹೋಗಿದ್ರಾ?‌ ಎಂದು ಪ್ರಶ್ನಿಸಿದರು.

‘ನಾನು ಇರುವಷ್ಟು ದಿನ ಮಾತ್ರ ಅಲ್ಲ. ನಾನು ಹೋದ ಮೇಲೆಯೂ ಈ ಪಕ್ಷ ಉಳಿಯಲಿದೆ. ಅದಕ್ಕಾಗಿ ನನ್ನ ಹೋರಾಟ ಇರಲಿದೆ. ಕುಮಾರಸ್ವಾಮಿ ಅವರ ಜೊತೆ ಮಾತಾಡಿದ್ದೇನೆ. ಏಕ ತೀರ್ಮಾನ ಬೇಡ, ಕೋರ್ ಕಮಿಟಿ ಮಾಡಿ ಅಲ್ಲಿ ಚರ್ಚೆ ಮಾಡೋಣ ಎಂದಿದ್ದೆ. ಕುಮಾರಸ್ವಾಮಿ, ರೇವಣ್ಣ ತೀರ್ಮಾನ ಮಾಡುವುದು ಬೇಡ ಎಂದು ಹೇಳಿದ್ದೇನೆ. ಶಿರಾ ಉಪ ಚುನಾವಣೆಯಲ್ಲಿ ಸೋತ ಬಳಿಕ ನನಗೆ ತುಂಬಾ ನೋವಾಗಿದೆ. ನಮಗೆ ಇನ್ನೂ ಕಾರ್ಯಕರ್ತರು ಇದ್ದಾರೆ. ಕಾರ್ಯಕರ್ತರಿಗೆ ಹುಮ್ಮಸ್ಸು ಇದೆ. ಹೀಗಾಗಿ ಯಾರಿಗಾದರೂ ಜವಾಬ್ದಾರಿ ಕೊಡಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.