ನವದೆಹಲಿ: ‘ರಾಜ್ಯದ ಪರಿಸ್ಥಿತಿ ಹೇಗಾಗಿದೆ ಎಂದರೆ ಆಲಿಬಾಬಾ ಮತ್ತು ಮೂವತ್ತನಾಲ್ಕು ಕಳ್ಳರು ಎನ್ನುವಂಥ ರೀತಿ ಆಗಿದೆ. ಮುಖ್ಯಮಂತ್ರಿ ಮತ್ತು ಸಚಿವರು ಕಮಿಷನ್ ಉಡಾಯಿಸಿ ಮೋಜು ಮಾಡುತ್ತಿದ್ದರೆ ಶಾಸಕರು ತಮ್ಮ ಕ್ಷೇತ್ರಗಳಿಗೆ ಮುಖ ಹಾಕಲಾರದ ದುಸ್ಥಿತಿಯಲ್ಲಿ ಇದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೇನಿದೆ? ಇದನ್ನು ಪ್ರತಿಪಕ್ಷದವರು ಹೇಳುತ್ತಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ ಬಿ.ಆರ್.ಪಾಟೀಲ, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಅಂಥವರೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ಈ ಸರ್ಕಾರಕ್ಕೆ ಭ್ರಷ್ಟಾಚಾರದ ಪ್ರಮಾಣಪತ್ರ ನೀಡಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ದರ್ಬಾರಿನಲ್ಲಿ ಶಾಸಕರ ಪರಿಸ್ಥಿತಿ ತಬರನ ಕಥೆಯಂತೆ ಆಗಿದೆ’ ಎಂದು ವ್ಯಂಗ್ಯವಾಡಿದರು. ‘ಶಾಸಕರು ಅನುದಾನಕ್ಕಾಗಿ, ಸರ್ಕಾರದ ಯೋಜನೆಗಳಿಗಾಗಿ ಕಚೇರಿಗಳ ಸುತ್ತ, ಮಂತ್ರಿಮಹೋದಯರ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರಿಗೇ ಇಂಥ ದುರ್ಗತಿ ಬಂದರೆ ಇತರೆ ಪಕ್ಷಗಳ ಶಾಸಕರ ಪರಿಸ್ಥಿತಿ ಏನು’ ಎಂದು ಪ್ರಶ್ನಿಸಿದರು.
‘ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಎನ್ನುವವರು ಇದ್ದಾರಾ? ಸರ್ಕಾರ ಎನ್ನುವುದು ಇದೆಯಾ? ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಹೆಚ್ಚು ಪ್ರಶ್ನೆ ಕೇಳಿದರೆ ಅವರು ಕದ್ದು ಓಡುತ್ತಾರೆ’ ಎಂದರು.
‘ರಾಯಚೂರಿನಲ್ಲಿ ಶಾಸಕರ ಅನುದಾನದ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಧ್ಯಮದವರು ಪ್ರಶ್ನೆ ಕೇಳಿದರೆ, ಮುಖ್ಯಮಂತ್ರಿಗೆ ಅನುದಾನ ಇರುತ್ತದಾ? ಹ್ಹಾ.. ಹ್ಹಾ.. ಎಂದು ಉದ್ಗಾರ ತೆಗೆದರು. ಎಲ್ಲಿದೆ ವಿಶೇಷ ಅನುದಾನ ಎಂದು ಮಾಧ್ಯಮದವರಿಗೇ ಅವರು ಪ್ರಶ್ನೆ ಕೇಳಿದರು. ಅವರನ್ನು ಮುಖ್ಯಮಂತ್ರಿ ಅನ್ನಬೇಕಾ? ಈ ಭಾಗ್ಯಕ್ಕೆ ಅವರು ದೇವರಾಜ ಅರಸು ದಾಖಲೆ ಮುರಿಯಲು ಹೊರಟಿದ್ದಾರೆಯೇ’ ಎಂದು ಅವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.