ADVERTISEMENT

ಅಲ್ಪಸಂಖ್ಯಾತರ ಹೆಸರಲ್ಲಿ ₹ 625 ಕೋಟಿ ಗೋಲ್‌ಮಾಲ್: ಎಚ್‌ಡಿಕೆ

₹398 ಕೋಟಿ ಬಳಕೆಗೆ ಹಣಕಾಸು ಇಲಾಖೆ ಆಕ್ಷೇಪ: ಪತ್ರ ಪ್ರದರ್ಶಿಸಿದ ಕೇಂದ್ರ ಸಚಿವ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:45 IST
Last Updated 23 ಜೂನ್ 2025, 15:45 IST
ಎಚ್‌.ಡಿ.ಕುಮಾರಸ್ವಾಮಿ 
ಎಚ್‌.ಡಿ.ಕುಮಾರಸ್ವಾಮಿ    

ನವದೆಹಲಿ: ‘ಅಲ್ಪಸಂಖ್ಯಾತರ ಹೆಸರಿನಲ್ಲಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ₹625 ಕೋಟಿ ಗೋಲ್‌ಮಾಲ್‌ ನಡೆಸಿದೆ. ಅಲ್ಪಸಂಖ್ಯಾತರ ಕೊಳೆಗೇರಿ ಅಭಿವೃದ್ಧಿಯ ₹398 ಕೋಟಿ ಯೋಜನೆಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ' ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. 

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿ ಇದೇ 20ರಂದು ಹಣಕಾಸು ಇಲಾಖೆಯ ಕಾರ್ಯದರ್ಶಿ (ವೆಚ್ಚ) ಅವರು ಬರೆದ ಪತ್ರವನ್ನು ಪ್ರದರ್ಶಿಸಿದರು. 

‘ಮುಖ್ಯಮಂತ್ರಿ ಸಚಿವಾಲಯದಿಂದ ನಿವೃತ್ತ ಐಎಎಸ್‌ ಅಧಿಕಾರಿ ಎಲ್‌.ಕೆ. ಅತೀಕ್ (ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಅವರನ್ನು ಏಕೆ ತೆಗೆದರು? ಈ ವ್ಯಕ್ತಿ ಮುಂದಿನ ಮೂರು ವರ್ಷಕ್ಕೆ ₹1000 ಕೋಟಿ ಅನುದಾನದ ಕ್ರಿಯಾಯೋಜನೆಗೆ ಮಂಜೂರಾತಿ ನೀಡಿದ್ದರು. ಈ ಹಣದಲ್ಲಿ ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಎಷ್ಟು ಹಣ ತಿಂದಿದ್ದೀರಿ? ಈ ಅತೀಕ್‌ ಎಂಬ ವ್ಯಕ್ತಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಏನೆಲ್ಲಾ ಮಾಡಿದ್ದರು ಎಂಬುದು ನನಗೆ ಗೊತ್ತಿದೆ. ಕಾಂಗ್ರೆಸ್‌ನವರು ಅವರಿಂದ ಏನೇನು ಮಾಡಿಸಿದರು ಎನ್ನುವುದೂ ಗೊತ್ತಿದೆ. ಈ ಸರ್ಕಾರದಲ್ಲಿ ಸರ್ಕಾರಕ್ಕಿಂತಲೂ ದೊಡ್ಡವರು ಇದ್ದಾರೆ. ಅವರೆಲ್ಲ ಮುಖ್ಯಮಂತ್ರಿಯವರ ಸುತ್ತ ಇದ್ದಾರೆ. ಸರ್ಕಾರದ ಒಪ್ಪಿಗೆಯೇ ಇಲ್ಲದೆ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆಯನ್ನೂ ಪಡೆಯದೇ ₹625 ಕೋಟಿ ಹಣ ಬಿಡುಗಡೆ ಆಗಿದೆ’ ಎಂದು ಅವರು ಆರೋಪಿಸಿದರು. 

ADVERTISEMENT

‘ಸಂಪುಟದ ಒಪ್ಪಿಗೆ ಪಡೆಯದೇ ಹಣ ವೆಚ್ಚ ಮಾಡಲಾಗಿದೆ. ಅಲ್ಪಸಂಖ್ಯಾತರಿಗೆ ಸೇರಿದ ಕೋಟಿ ಕೋಟಿ ಹಣ ಲೂಟಿ ಆಗಿದೆ. ಈ ಮುಖ್ಯಮಂತ್ರಿಗೆ ಅಧಿಕಾರದಲ್ಲಿ ಮುಂದುವರೆಯಲು ಯೋಗ್ಯತೆ ಇದೆಯಾ?’ ಎಂದು ಕಿಡಿಕಾರಿದ ಸಚಿವರು, ‘ಕಾನೂನ ಚೌಕಟ್ಟಿನಲ್ಲಿ ಅಲ್ಪಸಂಖ್ಯಾತರಿಗೆ ಎಷ್ಟು ಬೇಕಾದರೂ ನೆರವು ಕೊಡಿ. ಆದರೆ, ಕೊಳ್ಳೆ ಹೊಡೆಯಲು ಹಣಕಾಸು ಇಲಾಖೆ ಒಪ್ಪಿಗೆಯೇ ಇಲ್ಲದೆ ಹಣ ಬಿಡುಗಡೆ ಹೇಗಾಯಿತು? ಇದಕ್ಕೆ ಹೊಣೆ ಯಾರು? ಎಲ್ಲರೂ ಕಾನೂನಿನ ಕಟಕಟೆಯಲ್ಲಿ ನಿಲ್ಲಲೇಬೇಕು’ ಎಂದರು. 

ವಸತಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಕಾಂಗ್ರೆಸ್‌ ದರ್ಬಾರಿನಲ್ಲಿ ಶಾಸಕರ ಪರಿಸ್ಥಿತಿ ತಬರನ ಕಥೆಯಂತೆ ಆಗಿದೆ’ ಎಂದು ವ್ಯಂಗ್ಯವಾಡಿದರು. 

‘ಶಾಸಕರು ಅನುದಾನಕ್ಕಾಗಿ, ಸರ್ಕಾರದ ಯೋಜನೆಗಳಿಗಾಗಿ ಕಚೇರಿಗಳ ಸುತ್ತ, ಮಂತ್ರಿಮಹೋದಯರ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರಿಗೇ ಇಂಥ ದುರ್ಗತಿ ಬಂದರೆ ಇತರೆ ಪಕ್ಷಗಳ ಶಾಸಕರ ಪರಿಸ್ಥಿತಿ ಏನು?’ ಎಂದು ಪ್ರಶ್ನಿಸಿದರು.

‘ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಎನ್ನುವವರು ಇದ್ದಾರಾ? ಸರ್ಕಾರ ಎನ್ನುವುದು ಇದೆಯಾ? ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಹೆಚ್ಚು ಪ್ರಶ್ನೆ ಕೇಳಿದರೆ ಅವರು ಕದ್ದು ಓಡುತ್ತಾರೆ’ ಎಂದರು. 

‘ರಾಯಚೂರಿನಲ್ಲಿ ಶಾಸಕರ ಅನುದಾನದ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಧ್ಯಮದವರು ಪ್ರಶ್ನೆ ಕೇಳಿದರೆ, ಮುಖ್ಯಮಂತ್ರಿಗೆ ಅನುದಾನ ಇರುತ್ತದಾ? ಹ್ಹಾ.. ಹ್ಹಾ.. ಎಂದು ಉದ್ಘಾರ ತೆಗೆದರು. ಎಲ್ಲಿದೆ ವಿಶೇಷ ಅನುದಾನ ಎಂದು ಮಾಧ್ಯಮದವರಿಗೇ ಅವರು ಪ್ರಶ್ನೆ ಕೇಳಿದರು. ಅವರನ್ನು ಮುಖ್ಯಮಂತ್ರಿ ಅನ್ನಬೇಕಾ? ಈ ಭಾಗ್ಯಕ್ಕೆ ಅವರು ದೇವರಾಜ ಅರಸು ದಾಖಲೆ ಮುರಿಯಲು ಹೊರಟಿದ್ದಾರೆಯೇ?’ ಎಂದು ಅವರು ಪ್ರಶ್ನಿಸಿದರು. 

ಆಲಿಬಾಬಾ ಮತ್ತು 34 ಕಳ್ಳರ ಸರ್ಕಾರ: ಎಚ್‌ಡಿಕೆ

‘ರಾಜ್ಯದ ಪರಿಸ್ಥಿತಿ ಹೇಗಾಗಿದೆ ಎಂದರೆ ಆಲಿಬಾಬಾ ಮತ್ತು ಮೂವತ್ತನಾಲ್ಕು ಕಳ್ಳರು ಎನ್ನುವಂಥ ರೀತಿ ಆಗಿದೆ. ಮುಖ್ಯಮಂತ್ರಿ ಮತ್ತು ಸಚಿವರು ಕಮಿಷನ್‌ ಉಡಾಯಿಸಿ ಮೋಜು ಮಾಡುತ್ತಿದ್ದರೆ ಶಾಸಕರು ತಮ್ಮ ಕ್ಷೇತ್ರಗಳಿಗೆ ಮುಖ ಹಾಕಲಾರದ ದುಸ್ಥಿತಿಯಲ್ಲಿ ಇದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೇನಿದೆ?. ಇದನ್ನು ಪ್ರತಿಪಕ್ಷದವರು ಹೇಳುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಹಿರಿಯ ಶಾಸಕರಾದ ಬಿ.ಆರ್.‌ಪಾಟೀಲ, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಅಂಥವರೇ ಹೇಳುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರೇ ಈ ಸರ್ಕಾರಕ್ಕೆ ಭ್ರಷ್ಟಾಚಾರದ ಪ್ರಮಾಣಪತ್ರ ನೀಡಿದ್ದಾರೆ’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. 

ಕುಂಭಕರ್ಣ ನಿದ್ದೆಯಲ್ಲಿದ್ದ ಪಾಟೀಲ: ಎಚ್‌ಡಿಕೆ ಕಿಡಿ

ಅಕ್ರಮ ಗಣಿಗಾರಿಕೆಯಿಂದ ಬೊಕ್ಕಸಕ್ಕೆ ಆಗಿರುವ ₹ 1.50 ಲಕ್ಷ ಕೋಟಿ ನಷ್ಟವನ್ನು ಆರೋಪಿಗಳಿಂದ ವಸೂಲು ಮಾಡಲು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಒಬ್ಬ ವಸೂಲಾತಿ ಆಯುಕ್ತರನ್ನು ತಕ್ಷಣ ನೇಮಿಸಬೇಕು ಎಂದು ಆಗ್ರಹಿಸಿ ಕಾನೂನು ಸಚಿವ ಎಚ್​.ಕೆ. ಪಾಟೀಲ ಪತ್ರ ಬರೆದಿದ್ದಾರೆ. ಅವರು ಇಷ್ಟು ದಿನ ಕುಂಭಕರ್ಣ ನಿದ್ರೆಯಲ್ಲಿದ್ದಾರಾ. ಏಳು ಪುಟಗಳ ಪತ್ರವನ್ನು ಕಾವ್ಯಮಯವಾಗಿ ಬರೆದಿದ್ದಾರೆ ಅಷ್ಟೇ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಪತ್ರದ ತಂತ್ರ ನಡೆಸಿದ್ದಾರೆ. ಈ ಪತ್ರವನ್ನು ಕಸದ ಬುಟ್ಟಿಗೆ ಎಸೆಯಬೇಕು. ಕಳೆದ ಬಾರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಕಾನೂನುಬಾಹಿರವಾಗಿ ಏಳು ಗಣಿ ಕಂಪನಿಗಳಿಗೆ ಅನುಮತಿ ನೀಡಿದ್ದರು. ಅದರ ಬಗ್ಗೆ ಏನು ಹೇಳುತ್ತೀರಿ ಎಚ್.ಕೆ. ಪಾಟೀಲರೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.