ADVERTISEMENT

ಕೇತಗಾನಹಳ್ಳಿ ಜಮೀನು ಪ್ರಕರಣ | ಎಚ್‌ಡಿಕೆ ಒತ್ತುವರಿ: ಸಮಗ್ರ ವರದಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 14:24 IST
Last Updated 8 ಅಕ್ಟೋಬರ್ 2025, 14:24 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು:‌ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 6 ಎಕರೆ 6 ಗುಂಟೆ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ರಾಮನಗರ ಜಿಲ್ಲಾಧಿಕಾರಿಗೆ ಹೈಕೋರ್ಟ್‌ ಆದೇಶಿಸಿದೆ.

ಒತ್ತುವರಿ ಆರೋಪದ ತನಿಖೆಗೆ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಿದ ಆದೇಶಕ್ಕೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ತಡೆ ಆದೇಶ ತೆರವುಗೊಳಿಸುವಂತೆ ಕೋರಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ರಾಮನಗರ ತಹಶೀಲ್ದಾರ್‌ ಸಲ್ಲಿಸಿರುವ ರಿಟ್‌ ಮೇಲ್ಮನವಿಯನ್ನು ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಈ ಪ್ರಕರಣದಲ್ಲಿ ಪ್ರತಿವಾದಿ ಎಚ್‌.ಡಿ.ಕುಮಾರಸ್ವಾಮಿ ಹೊಂದಿರುವ 22 ಎಕರೆ ಜಮೀನಿನಲ್ಲಿ 6 ಎಕರೆ 6 ಗುಂಟೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ ಆರೋಪವಿದೆ’ ಎಂದು ಪುನರುಚ್ಚರಿಸಿದರು.

ADVERTISEMENT

ಇದಕ್ಕೆ ಪ್ರತಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು, ‘ಇದೊಂದು ರಾಜಕೀಯ ಪ್ರೇರಿತ ದೂರು. ದೂರುದಾರ ಜಿ.ಮಾದೇಗೌಡ (ದಿವಂಗತ) ಕುಮಾರಸ್ವಾಮಿ ಅವರ ರಾಜಕೀಯ ಎದುರಾಳಿಯಾಗಿದ್ದವರು. ನಮ್ಮ ಅರ್ಜಿದಾರರು ಹೊಂದಿರುವ ಜಮೀನು ಶುದ್ಧ ಕ್ರಯಪತ್ರ ಹೊಂದಿದೆ. ಒತ್ತುವರಿ ಆಗಿದೆ ಎಂದಾಗಿದ್ದರೆ ಯಾವತ್ತೋ ಅದನ್ನು ಬಿಟ್ಟುಕೊಟ್ಟಿರುತ್ತಿದ್ದರು’ ಎಂದರು.

‘ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಜುನಾಥ್‌ ಪ್ರಸಾದ್‌ ಅವರು 2020ರ ಜೂನ್‌ 6ರಂದು ನೀಡಿರುವ ವರದಿ, ರಾಮನಗರ ಜಿಲ್ಲಾಧಿಕಾರಿ 2020ರ ಏಪ್ರಿಲ್‌ 7ರಂದು ನೀಡಿರುವ ವರದಿ ಮತ್ತು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು 2021ರ ಮಾರ್ಚ್‌3ರಂದು ನೀಡಿದ್ದ ವರದಿಗಳೆಲ್ಲಾ ಕುಮಾರಸ್ವಾಮಿ ಅವರ ಪರವಾಗಿವೆ’ ಎಂದರು.

ಪ್ರಕರಣದ ಇತರೆ ಪ್ರತಿವಾದಿಗಳಾದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರ ಪತ್ನಿ ಕೆ.ಜಿ.ಪ್ರಮೀಳಾ ಹಾಗೂ ಪುತ್ರ ಡಿ.ಟಿ ಸಂತೋಷ್‌ ಪರ ವಾದ ಮಂಡಿಸಿದ ಹೈಕೋರ್ಟ್‌ನ ಹಿರಿಯ ವಕೀಲ ಟಿ.ಸುನಿಲ್‌ ರಾವ್‌ ‘ಎಸ್‌ಐಟಿ ಕೊಟ್ಟಿರುವ ನೋಟಿಸ್‌ ಸಾಂವಿಧಾನಿಕವಾಗಿ ತಪ್ಪು ನಡೆಯಿಂದ ಕೂಡಿದೆ’ ಎಂದು ಪ್ರತಿಪಾದಿಸಿದರು.

ಕೆಲಕಾಲ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ವಿವಾದಿತ ಜಮೀನಿಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾಧಿಕಾರಿ ಸಮಗ್ರ ವರದಿ ಸಲ್ಲಿಸಬೇಕು’ ಎಂದು ನಿರ್ದೇಶಿಸಿತು. ಅಂತೆಯೇ, ಈ ಹಿಂದಿನ ವಿಚಾರಣೆಯಲ್ಲೇ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ಇದೇ 27ರವರೆಗೆ ವಿಸ್ತರಿಸಿ ವಿಚಾರಣೆ ಮುಂದೂಡಿತು. ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಕಿರಣ್‌ ವಿ.ರೋಣ, ಮಹಮ್ಮದ್‌ ಜಾಫರ್‌ ಶಾ ಮತ್ತು ಕುಮಾರಸ್ವಾಮಿ ಪರ ವಕಾಲತ್ತು ವಹಿಸಿರುವ ಹೈಕೋರ್ಟ್‌ ವಕೀಲ ಎ.ವಿ.ನಿಶಾಂತ್‌ ಹಾಜರಿದ್ದರು.

ಪ್ರಕರಣವೇನು?: ‘ಎಚ್‌.ಡಿ.ಕುಮಾರಸ್ವಾಮಿ, ಅವರ ಸಂಬಂಧಿಯೂ ಆದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ಇತರರು‌ ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ವೇ ನಂಬರ್‌ 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು 2020ರಲ್ಲಿ ಹೈಕೋರ್ಟ್‌ ಆದೇಶಿಸಿತ್ತು.

‘ಈ ಆದೇಶವನ್ನು ಜಾರಿಗೊಳಿಸಿಲ್ಲ’ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್.ಹಿರೇಮಠ ಅವರು, ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಐಎಎಸ್‌ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ 2025ರ ಜನವರಿ 28ರಂದು ಆದೇಶಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.