ADVERTISEMENT

HDK ವಿರುದ್ಧ ಜಮೀನು ಒತ್ತುವರಿ ಆರೋಪ; ಧೈರ್ಯವಿದ್ದರೆ ವಾಪಸು ಪಡೆಯಿರಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ಬಡವರು ಐದು ಅಡಿ ಒತ್ತುವರಿ ಮಾಡಿದರೆ ಸಾಕು ಓಡೋಡಿ ಬಂದು ತೆರವು‌ ಮಾಡ್ತೀರಿ. ಬುಲ್ಡೋಜರ್ ತೆಗೆದುಕೊಂಡು ಹೋಗಿ ಮನೆ ಒಡೆದು ಹಾಕುತ್ತೀರಿ. ಭಿಕ್ಷುಕರನ್ನೂ ಬಿಡುವುದಿಲ್ಲ. ಪ್ರಭಾವಿಗಳು ಒತ್ತುವರಿ ಮಾಡಿದರೆ ಸದರವೇ’ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಕಟುವಾಗಿ ಪ್ರಶ್ನಿಸಿದೆ.

‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದ ಸದಸ್ಯರು ಮಾಡಿರುವ ಒತ್ತುವರಿ ಜಮೀನನ್ನು ಧೈರ್ಯವಿದ್ದರೆ ವಾಪಸು ಪಡೆಯಿರಿ. ಇಲ್ಲವಾದರೆ ಬಿಟ್ಟುಬಿಡಿ’ ಎಂದು ತನ್ನ ವಾಗ್ದಾಳಿ ಮುಂದುವರಿಸಿದೆ.

ADVERTISEMENT

‘ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿ ಎಸ್‌.ಆರ್‌.ಹಿರೇಮಠ ನೇತೃತ್ವದ ‘ಸಮಾಜ ಪರಿವರ್ತನಾ ಸಮುದಾಯ’ ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್ ವಿ.ರೋಣ, ‘ಯಾರೇ ಆಗಲಿ, ಒಂದು ಇಂಚು ಜಮೀನು ಅತಿಕ್ರಮಣ ಆಗಿದ್ದರೂ ಬಿಡುವುದಿಲ್ಲ. ಸದ್ಯ 14 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 18 ಎಕರೆ ಒತ್ತುವರಿ ತೆರವಿಗೆ ಸಂಬಂಧಿಸಿ ನೋಟಿಸ್ ನೀಡಲಾಗುತ್ತಿದೆ’ ಎಂದರು.

ಅರ್ಜಿದಾರ ಹಿರೇಮಠ ಪರ ಪದಾಂಕಿತ ಹಿರಿಯ ವಕೀಲ ಎಸ್.ಬಸವರಾಜು, ‘110 ಎಕರೆ ಗೋಮಾಳ ಜಮೀನು ಒತ್ತುವರಿಯಾಗಿದೆ. ಪ್ರಭಾವಿಗಳು ಈ ಗೋಮಾಳ‌ ಜಮೀನು ಖರೀದಿಸಿದ್ದಾರೆ. ನಕಲಿ ಭೂ ಮಂಜೂರಾತಿ ಆಧರಿಸಿ ಖರೀದಿ ಮಾಡಲಾಗಿದೆ. ಈ ಬಗ್ಗೆ ತಹಶೀಲ್ದಾರ್‌ 2014ರಲ್ಲೇ ವರದಿ ನೀಡಿದ್ದಾರೆ. ಆದರೆ, ಸಂಪೂರ್ಣ ಒತ್ತುವರಿ ತೆರವುಗೊಳಿಸಿಲ್ಲ. ಹೀಗಾಗಿ, ಸಂಪೂರ್ಣ ಜಮೀನನ್ನು ಒತ್ತುವರಿ ಎಂದು ಪರಿಗಣಿಸಿ ವಶಪಡಿಸಿ ಕೊಳ್ಳಬೇಕು’ ಎಂದು ಕೋರಿದರು.

‘10 ದಿನದಲ್ಲಿ ಪೂರ್ಣ ವರದಿ ಕೊಡಿ’

‘ಕೇತಗಾನಹಳ್ಳಿ ಸರ್ವೆ ನಂ. 7, 8, 9, 10, 16, 17 ಮತ್ತು 79ರಲ್ಲಿ ಒತ್ತುವರಿಯಾಗಿರುವ ಜಮೀನು ತೆರವಿನ ಬಗ್ಗೆ 10 ದಿನದಲ್ಲಿ ಸಂಪೂರ್ಣ ವರದಿ ಕೊಡಿ. ಅರ್ಧಂಬರ್ಧ ಕೊಡಬೇಡಿ’ ಎಂದು ನ್ಯಾಯಪೀಠವು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾಗೆ ತಾಕೀತು ಮಾಡಿತು.

ಅರ್ಜಿ ದಾರರ ಪರ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ಕಟಾರಿಯಾ, ‘ಕೇತಗಾನಹಳ್ಳಿಯಲ್ಲಿ ಜಮೀನು ಮಂಜೂರು ಮಾಡಿದ ದಾಖಲೆ ಇಲ್ಲ. ಹೀಗಾಗಿ, ಸಮಿತಿ ರಚನೆ‌ ಮಾಡಲಾಗಿದ್ದು, ಮಂಜೂರಾತಿ ಪತ್ರಗಳು ಅಸಲಿ ಹೌದೊ ಅಲ್ಲವೊ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈಗ ದಾಖಲೆ ನಾಪತ್ತೆಯಾಗಿವೆ. ಮುಂದೆ ಜಮೀನೂ ನಾಪತ್ತೆ ಆಗಬಹುದು’ ಎಂದು ಕುಟುಕಿತಲ್ಲದೆ, ವಿಚಾರಣೆಯನ್ನು ಏಪ್ರಿಲ್‌ 3ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.