
ಬೆಂಗಳೂರು: ‘ಬಿ’ ಖಾತೆಯಿಂದ ‘ಎ’ ಖಾತೆ ಮಾಡಿಕೊಡುತ್ತೇವೆ ಎಂದು ಜನರಿಂದ ಲಕ್ಷ ಲಕ್ಷ ರೂಪಾಯಿ ಲೂಟಿ ಮಾಡಲು ಸರ್ಕಾರ ಮುಂದಾಗಿದೆ. ಈ ಸರ್ಕಾರಕ್ಕೆ ಹಣ ನೀಡಬೇಡಿ. ನಾವು ಅತ್ಯಂತ ಕಡಿಮೆ ಶುಲ್ಕಕ್ಕೆ ಈ ಕೆಲಸ ಮಾಡಿಕೊಡುತ್ತೇವೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿವೇಶನದ ಮಾರ್ಗದರ್ಶಿ ದರದ ಶೇ 10ರಷ್ಟನ್ನು ಪಾವತಿಸಿ ಎಂದು ಸರ್ಕಾರ ಹೇಳುತ್ತಿದೆ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಪ್ರತಿ ಚದರ ಅಡಿಗೆ ₹110 ನಿಗದಿ ಮಾಡಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ₹200ರಿಂದ ₹600 ನಿಗದಿ ಮಾಡಿದ್ದೆ. ಈ ಸರ್ಕಾರ ಪ್ರತಿ ಚದರ ಅಡಿಗೆ ಹತ್ತಾರು ಸಾವಿರ ರೂಪಾಯಿ ನಿಗದಿ ಮಾಡಿದೆ’ ಎಂದರು.
‘ಇವರು ಈಗ ನಿಗದಿ ಮಾಡಿರುವ ಪ್ರಮಾಣದಲ್ಲಿ ಪ್ರತಿ ನಿವೇಶನದವರು ಕನಿಷ್ಠ ₹5 ಲಕ್ಷದಿಂದ ₹25 ಲಕ್ಷದವರೆಗೂ ಶುಲ್ಕ ನೀಡಬೇಕಾಗುತ್ತದೆ. ಹದಿನೈದು–ಇಪ್ಪತ್ತು ವರ್ಷಗಳ ಹಿಂದೆ ₹15,000 ಕೊಟ್ಟು ನಿವೇಶನ ಖರೀದಿಸಿದ್ದವರು ಈಗ ಐದಾರು ಲಕ್ಷ ರೂಪಾಯಿ ಕಟ್ಟಬೇಕಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿಯೊಬ್ಬರು, ಅವರ ನಿವೇಶನದ ಖಾತೆಯನ್ನು ‘ಎ’ ಪರಿವರ್ತಿಸಿಕೊಳ್ಳಲು ₹25 ಲಕ್ಷ ಪಾವತಿಸಬೇಕಿದೆ. ಅವರು ಈಗ ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆಯ ಸರಕನ್ನಾಗಿ ಮಾಡಿಕೊಂಡಿದೆ. ಯಾವುದೇ ಕಾರಣಕ್ಕೂ ಒಂದು ನಯಾಪೈಸೆ ಕಟ್ಟಬೇಡಿ ಮತ್ತು ಯಾವುದೇ ಕಾರಣಕ್ಕೂ ಎರಡು ವರ್ಷ ಖಾತೆ ಮಾಡಿಸಿಕೊಳ್ಳಬೇಡಿ ಎಂದು ಬೆಂಗಳೂರಿನ ಜನರಿಗೆ ಹೇಳಲು ಬಯಸುತ್ತೇನೆ. ಇವರ ಮಾತಿಗೆ ಮರುಳಾಗಬೇಡಿ. ನಿಮ್ಮನ್ನು ಉಳಿಸುವ, ನಿಮ್ಮ ಹಿತ ಕಾಯುವ ಜವಾಬ್ದಾರಿ ನಮ್ಮದು’ ಎಂದರು.
‘ನಮ್ಮ ಸರ್ಕಾರ ಬಂದಾಗ, ಕಾಂಗ್ರೆಸ್ ಸರ್ಕಾರ ತಂದಿರುವ ‘ಬಿ’ ಯಿಂದ ‘ಎ’ ಖಾತೆ ಪರಿವರ್ತನೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲೇ ಮಾಡಿಕೊಡುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.