ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲು ಎಚ್‌.ಡಿ.ಕುಮಾರಸ್ವಾಮಿ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2020, 7:33 IST
Last Updated 23 ಜೂನ್ 2020, 7:33 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಕೊರೊನಾ ಸೋಂಕು ಪ್ರಸರಣ ಭೀತಿ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಅಥವಾ ಅಕ್ಟೋಬರ್‌ ವರೆಗೆ ಮುಂದೂಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಗುರುವಾರದಿಂದ ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು. ಪರೀಕ್ಷೆ ನಡೆಸಲೇಬೇಕು ಎಂದಾದರೆ ಅಕ್ಟೋಬರ್ ತಿಂಗಳವರೆಗೆ ಕಾಯ್ದು ನಡೆಸಲಿ’ ಎಂದು ಉಲ್ಲೇಖಿಸಿದ್ದಾರೆ.

‘ಕೊರೊನಾ ಸೋಂಕು ಸಮುದಾಯ ಪ್ರಸರಣ ಭೀತಿಯ ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಪಡಿಸಿ ಎಲ್ಲರನ್ನೂ ಉತ್ತೀರ್ಣಗೊಳಿಸಲಾಗಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ನಿರ್ಧಾರ ತಳೆಯಬಹುದು. ಪರೀಕ್ಷೆಗಳನ್ನು ನಡೆಸಲೇಬೇಕೆಂದರೆ ಅಕ್ಟೋಬರ್ ತಿಂಗಳವರೆಗೆ ಕಾಯಲಿ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಏನಾದರೂ ಅವಘಡಗಳು ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡುತ್ತೇನೆ. ಸರ್ಕಾರ ಈ ಬಗ್ಗೆ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.