
ಬೆಂಗಳೂರು: ‘ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಇದೆ. ಆಡಳಿತ ಪಕ್ಷದಲ್ಲಿನ ಭಿನ್ನಮತ ಬಗೆಹರಿಸಿಕೊಳ್ಳದೇ ಇದ್ದರೆ, ಸರ್ಕಾರ ಬಿದ್ದುಹೋಗುತ್ತದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಈ ಸರ್ಕಾರಕ್ಕೆ 136 ಶಾಸಕರ ಬಲ ಇದೆ. ಆದರೆ, ಎರಡೂವರೆ ವರ್ಷ ಸರ್ಕಾರ ನಡೆಸುವಲ್ಲಿ ಹಲವು ಬಾರಿ ನಗೆಪಾಟಲಿಗೆ ಈಡಾಗಿದ್ದಾರೆ. ಈ ಬಗ್ಗೆ ನಾವೇನು ಮಾತನಾಡುವುದು? ಸರ್ಕಾರದ ಸಚಿವರು, ಆಡಳಿತ ಪಕ್ಷದ ಶಾಸಕರೇ ಈ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದರು.
ಮಧ್ಯಂತರ ಚುನಾವಣೆಗೆ ತಾವು ಸಿದ್ಧ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿಕೆ ನೀಡಿರುವ ಬಗ್ಗೆ ಪ್ರಶ್ನಿಸಿದಾಗ, ‘ಮಧ್ಯಂತರ ಚುನಾವಣೆಯ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಮಧ್ಯಂತರ ಚುನಾವಣೆಗೆ ಅಶೋಕ ಅವರು ಸಿದ್ಧ ಎನ್ನುವುದಾದರೆ, ನಾವೂ ಸಿದ್ಧ. ಸರ್ಕಾರ ಬಿದ್ದರೆ ನಾವು ಚುನಾವಣೆಗೆ ತಯಾರಿ ಆಗಲೇಬೇಕು’ ಎಂದು ಉತ್ತರಿಸಿದರು.
‘ಅಧಿಕಾರ ಹಸ್ತಾಂತರ, ಮುಖ್ಯಮಂತ್ರಿ ಬದಲಾವಣೆ ಎಲ್ಲ ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆ ಬಗ್ಗೆ ನಾನು ಮಾತನಾಡುವುದು ಸಣ್ಣತನ ಆಗುತ್ತದೆ. ಅವರ ಪಕ್ಷದಲ್ಲಿ ಏನು ತೀರ್ಮಾನ ಮಾಡಿಕೊಳ್ಳುತ್ತಾರೋ, ಮಾಡಿಕೊಳ್ಳಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಮೊದಲು ಶಿಕ್ಷಣ ಕೊಡಲಿ’: ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕುರಿತಾಗಿ ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ ಅವರು, ‘ಸಮೀಕ್ಷೆಯಿಂದ ಏನು ಸಾಧನೆ ಮಾಡುತ್ತಾರೆ? ಜನರು ಎಷ್ಟರಮಟ್ಟಿಗೆ ಆ ಸಮೀಕ್ಷೆಗೆ ಸ್ಪಂದಿಸಿದ್ದಾರೆ’ ಎಂದು ಮರುಪ್ರಶ್ನೆ ಹಾಕಿದರು.
‘ಸಮಾಜದಲ್ಲಿ ಯಾರೆಲ್ಲಾ ಬಡವರು ಎಂಬುದನ್ನು ಗುರುತಿಸಬೇಕು. ಇಲ್ಲಿ ಜಾತಿಯ ಪ್ರಶ್ನೆ ಇಲ್ಲ. ಎಲ್ಲ ಜಾತಿಗಳಲ್ಲೂ ಬಡವರಿದ್ದಾರೆ. ಬಡತನ ಹೋಗಲಾಡಿಸಲು ಶಿಕ್ಷಣ ಕೊಡುವ ಕೆಲಸವಾಗಬೇಕು. ಆದರೆ ಸರ್ಕಾರಿ ಶಾಲೆಗಳಲ್ಲಿ 63,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇವರು ಮೊದಲು ಶಿಕ್ಷಣ ಕೊಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.