ADVERTISEMENT

ಚುನಾವಣಾ ಅಕ್ರಮ ಆರೋಪ: ರೇವಣ್ಣ ಪರ ವಕಾಲತ್ತು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2023, 15:15 IST
Last Updated 13 ಅಕ್ಟೋಬರ್ 2023, 15:15 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಬೆಂಗಳೂರು: ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಶಾಸಕ ಎಚ್‌.ಡಿ.ರೇವಣ್ಣ ಮತ್ತು ಹಾಸನ‌ ಕ್ಷೇತ್ರದ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ನೋಟಿಸ್‌ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಅವರ ಪರ ವಕೀಲರು ಶುಕ್ರವಾರ ಹೈಕೋರ್ಟ್‌ಗೆ ವಕಾಲತ್ತು ಸಲ್ಲಿಸಿದರು.

ಚುನಾವಣಾ ಅಕ್ರಮ ಎಸಗಿದ್ದ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್‌ ರೇವಣ್ಣ ಆಯ್ಕೆಯನ್ನು ಅನೂರ್ಜಿತಗೊಳಿಸಿ ಹೈಕೋರ್ಟ್‌ 2023ರ ಸೆಪ್ಟೆಂಬರ್ 1ರಂದು ತೀರ್ಪು ನೀಡಿತ್ತು. ಈ ಸಂಬಂಧ ಪ್ರಜ್ವಲ್‌ ರೇವಣ್ಣ ಮತ್ತು ಎಚ್‌.ಡಿ.ರೇವಣ್ಣ ವಿರುದ್ಧ ಜನಪ್ರತಿನಿಧಿಗಳ ಕಾಯ್ದೆ-1950ರ ಕಲಂ 99(1)(ಎ)(2) ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು 2023ರ ಸೆಪ್ಟೆಂಬರ್ 13ರಂದು ಷೋಕಾಸ್ ನೋಟಿಸ್‌ ಜಾರಿಗೊಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಎಚ್‌.ಡಿ. ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್‌ ರೇವಣ್ಣ ಪರ ವಕೀಲ ಎ.ವಿ.ನಿಶಾಂತ್‌ ನ್ಯಾಯಪೀಠ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಹಾಜರಾಗಿ ವಕಾಲತ್ತು ಮತ್ತು ಮೆಮೊ ಸಲ್ಲಿಸಿದರು.

ADVERTISEMENT

ವಿಚಾರಣೆ ವೇಳೆ ನ್ಯಾಯಪೀಠವು, ನೋಟಿಸ್‌ ಪಡೆದವರು ಎಲ್ಲಿ? ಎಂದು ಪ್ರಶ್ನಿಸಿತು. ಇದಕ್ಕೆ ನಿಶಾಂತ್‌, ‘ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಪ್ರಜ್ವಲ್‌ ಮತ್ತು ಎಚ್‌.ಡಿ. ರೇವಣ್ಣ ವಿರುದ್ಧದ ಆದೇಶಕ್ಕೆ ಸುಪ್ರಿಂ ಕೋರ್ಟ್‌ 2023ರ ಸೆಪ್ಟೆಂಬರ್ 18ರಂದು ತಡೆ ನೀಡಿದೆ’ ಎಂದು ತಿಳಿಸಿ ಮೆಮೊ ಸಲ್ಲಿಸಿದರು.

ಮೆಮೊ ದಾಖಲಿಸಿಕೊಂಡ ನ್ಯಾಯಪೀಠ, ‘ಸುಪ್ರಿಂ ಕೋರ್ಟ್‌ನಿಂದ ಮುಂದಿನ ಆದೇಶ ಪ್ರಕಟವಾದ ಮೇಲೆ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಿಬೇಕು’ ಎಂದು ರಿಜಿಸ್ಟ್ರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.