ADVERTISEMENT

ವಿಧಾನಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ | ಸಮಯ ಬಂದಾಗ ಚರ್ಚೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 16:13 IST
Last Updated 14 ಫೆಬ್ರುವರಿ 2026, 16:13 IST
<div class="paragraphs"><p>ಎಚ್‌.ಡಿ ಕುಮಾರಸ್ವಾಮಿ</p></div>

ಎಚ್‌.ಡಿ ಕುಮಾರಸ್ವಾಮಿ

   

ಬೆಂಗಳೂರು: ‘ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷಗಳು ಇವೆ. ಈಗಲೇ ಮೈತ್ರಿಯ ಮಾತೇಕೆ? ಆ ಬಗ್ಗೆ ನಾವೂ ಮಾತನಾಡಿಲ್ಲ, ಅವರೂ (ಬಿಜೆಪಿ) ಮಾತನಾಡಿಲ್ಲ. ಮೈತ್ರಿ ಬಗ್ಗೆ ಚರ್ಚೆಯೇ ಆಗಿಲ್ಲ. ಸಮಯ ಬಂದಾಗ ಆ ಚರ್ಚೆ ಮಾಡುತ್ತೇವೆ’ ಎಂದು ಕೇಂದ್ರ ಸಚಿವರೂ ಆಗಿರುವ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಅತ್ಯಂತ ಕೆಟ್ಟ ಸರ್ಕಾರ ಇದೆ. ಅದನ್ನು ತೊಲಗಿಸಿ ಜನಪರ ಸರ್ಕಾರ ತರಬೇಕು ಎಂಬುದು ಜೆಡಿಎಸ್‌ ಮತ್ತು ಬಿಜೆಪಿಯ ಕಾರ್ಯಸೂಚಿ. ಎರಡೂ ಪಕ್ಷಗಳು ಸೇರಿ ಆ ಕೆಲಸ ಮಾಡುತ್ತವೆ. ಒಟ್ಟಾಗಿ ಮೈತ್ರಿಕೂಟವನ್ನು ಬಲಪಡಿಸುತ್ತೇವೆ, ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ’ ಎಂದರು.

ADVERTISEMENT

113 ಸ್ಥಾನ ಬಂದವರು ಮುಖ್ಯಮಂತ್ರಿ ಆಗುತ್ತಾರೆ ಎಂದ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ‘ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಈಗ ಚರ್ಚೆ ಏಕೆ? ಅದಕ್ಕೆಲ್ಲಾ ಬಹಳ ಸಮಯ ಇದೆ. ಯಾರೋ ನೀಡಿದ ಹೇಳಿಕೆಗಳಿಗೆಲ್ಲಾ ಪ್ರತಿಕ್ರಿಯೆ ನೀಡಿದರೆ, ನನಗೆ ಪ್ರಬುದ್ಧತೆ ಇಲ್ಲ ಎನ್ನುತ್ತಾರೆ. ಅಂತಹ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ಮತ್ತೆ ಮತ್ತೆ ಈ ಬಗ್ಗೆ ಪ್ರಶ್ನಿಸಿದಾಗ, ‘ಈಗಲೇ ಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತನಾಡಿದರೆ, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಜಿಬಿಎಯ ಪಾಲಿಕೆಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಇನ್ನೇನು ಚುನಾವಣೆ ನಡೆಯಲಿವೆ. ಅದಕ್ಕೆ ಎಲ್ಲ ಪಕ್ಷಗಳೂ ಸಿದ್ಧತೆ ಮಾಡಿಕೊಂಡಿವೆ. ನಾವೂ ಸಿದ್ದತೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿಯೇ ಇಂದು (ಶನಿವಾರ) ಸಭೆ ಕರೆಯಲಾಗಿತ್ತು. ಮತಗಟ್ಟೆ, ವಾರ್ಡ್‌ ಮತ್ತು ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಸಂಬಂಧ ಎರಡೂ ಪಕ್ಷಗಳ ಮಧ್ಯೆ ಈವರೆಗೆ ಚರ್ಚೆ ಆಗಿಲ್ಲ. ಸಮಯ ಬಂದಾಗ ಚರ್ಚೆ ಮಾಡುತ್ತೇವೆ. ಆಗ ಪಕ್ಷದ ವೇದಿಕೆಯಲ್ಲೂ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೆಡಿಎಸ್‌ ಮತ್ತು ಬಿಜೆಪಿ ಒಟ್ಟಾಗಿ ಮೈತ್ರಿಕೂಟವನ್ನು ಬಲಪಡಿಸಲಿವೆ’ ಎಂದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಟಿ.ಎನ್‌. ಜವರಾಯಿ ಗೌಡ, ಜೆಡಿಎಸ್‌ ಬೆಂಗಳೂರು ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ, ಪಕ್ಷದ ನಾಯಕರಾದ ಕೆ.ಎ.ತಿಪ್ಪೇಸ್ವಾಮಿ, ಇ.ಕೃಷ್ಣಪ್ಪ, ನಿಸರ್ಗ ನಾರಾಯಣಸ್ವಾಮಿ, ಗೊಟ್ಟಿಗೆರೆ ಮಂಜುನಾಥ ಅವರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.