ADVERTISEMENT

ಕುಮಾರಸ್ವಾಮಿಗೆ ಸಿದ್ದರಾಮಯ್ಯ ಅಭಯ

​ಪ್ರಜಾವಾಣಿ ವಾರ್ತೆ
Published 24 ಮೇ 2019, 20:06 IST
Last Updated 24 ಮೇ 2019, 20:06 IST
   

ಬೆಂಗಳೂರು: ‘ನಾಲ್ಕು ವರ್ಷ ನೀವೇ ಮುಖ್ಯಮಂತ್ರಿಯಾಗಿ ಮುಂದುವರಿಯಿರಿ. ನಿಮ್ಮ ಬೆಂಬಲಕ್ಕೆ ಬಂಡೆಗಲ್ಲಿನಂತೆ ನಿಲ್ಲುತ್ತೇನೆ. ಎಂತದೇ ಪರಿಸ್ಥಿತಿ ಎದುರಾದರೂ ಸರ್ಕಾರ ಅಭದ್ರಗೊಳಿಸಲು ಬಿಡುವುದಿಲ್ಲ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಅಭಯ ನೀಡಿದ್ದಾರೆ.

ಸೋಲಿನ ಆಘಾತದ ಬಳಿಕ ಹಳೆಯ ವೈಮನಸ್ಸು, ಪ್ರತಿಷ್ಠೆಯನ್ನು ಮರೆತ ಇಬ್ಬರು ನಾಯಕರು ಶುಕ್ರವಾರ ಸಂಜೆ ಭೇಟಿಯಾಗಿ ಸುಮಾರು ಒಂದು ತಾಸು ಚರ್ಚೆ ನಡೆಸಿದರು.

ಸಿದ್ದರಾಮಯ್ಯ ನಿವಾಸ ‘ಕಾವೇರಿ’ಗೆ ಭೇಟಿ ನೀಡಿದ ಮುಖ್ಯಮಂತ್ರಿ ಚುನಾವಣೆಯ ಹೊತ್ತಿನಲ್ಲಿ ಆಗಿ ಹೋದ ತಪ್ಪುಗಳ ಬಗ್ಗೆ ವಿವರಣೆ ಕೊಟ್ಟರು.

ADVERTISEMENT

‘ಎರಡೂ ಕಡೆಯವರಿಂದಲೂ ಅನೇಕ ತಪ್ಪುಗಳು ಆಗಿಹೋಗಿವೆ. ಅದನ್ನು ಮುಂದುವರಿಸಿಕೊಂಡು ಹೋಗುವುದು ಬೇಡ ಎಂದು ಮನವಿ ಮಾಡಲು ಬಂದಿದ್ದೇನೆ. ಎಲ್ಲರೂ ಕೂಡಿ ಒಳ್ಳೆಯ ಸರ್ಕಾರ ನೀಡೋಣ. ಹಳೆಯದನ್ನು ಮರೆಯೋಣ. ನಿಮ್ಮ ಸಹಕಾರ ಬೇಕು ಕುಮಾರಸ್ವಾಮಿ ಕೋರಿದರು’ ಎಂದು ಮೂಲಗಳು ಹೇಳಿವೆ.

‘ನಡೆದಿದ್ದರ ಚಿಂತಿಸಿ, ಅದರ ಬಗ್ಗೆ ಪರಸ್ಪರ ದೂಷಣೆ ಮಾಡುತ್ತಾ ಕೂರುವುದಲ್ಲಿ ಅರ್ಥವಿಲ್ಲ. ಬಿಜೆಪಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದರಿಂದ ದೇಶಕ್ಕೆ ಮುಂದಿನ ದಿನಗಳು ಗಂಡಾಂತರ ತರಲಿವೆ. ಎಲ್ಲ ಜಾತ್ಯತೀತರೂ ಒಂದಾಗಿ ಮುನ್ನಡೆಯದಿದ್ದರೆ, ತಮ್ಮ ಪ್ರತಿಷ್ಠೆ ಮರೆಯದಿದ್ದರೆ ಉಳಿಗಾಲವಿಲ್ಲ. ನೀವು ಸರ್ಕಾರದ ಭದ್ರತೆ ಬಗ್ಗೆ ಯೋಚಿಸುವುದು ಬೇಡ. ನಿಮ್ಮ ಜತೆಗೆ ನಾನು ನಿಲ್ಲುತ್ತೇನೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದರು’ ಎಂದು ಮೂಲಗಳು ವಿವರಿಸಿವೆ.

‘ನಮ್ಮ ಸಚಿವರಿಗೂ ಈ ಬಗ್ಗೆ ತಿಳಿಸಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಹಾಗೂ ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ಕೊಡಿ. ಅತೃಪ್ತಿ ಹೊಂದಿರುವ ಎಲ್ಲ ಶಾಸಕರ ಜತೆ ಮಾತನಾಡಿ ಅವರನ್ನು ಸಮಾಧಾನ ಪಡಿಸುವುದು ನನ್ನ ಜವಾಬ್ದಾರಿ. ನಿಮ್ಮ ಪಕ್ಷ ಪ್ರತಿನಿಧಿಸುವ ಸಚಿವರಿಗೂ ನಮ್ಮ ಪಕ್ಷದ ಶಾಸಕರು ಹಾಗೂ ಮುಖಂಡರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವಂತೆ ಸೂಚಿಸಿ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.