ADVERTISEMENT

ಎಚ್‌ಡಿಕೆ ಪುತ್ರ ನಿಖಿಲ್ ಮದುವೆ ವೇಳೆ ಲಾಕ್‌ಡೌನ್ ನಿಯಮ ಉಲ್ಲಂಘನೆ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 6 ಮೇ 2020, 2:38 IST
Last Updated 6 ಮೇ 2020, 2:38 IST
   

ಬೆಂಗಳೂರು: 'ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹ ಸಮಾರಂಭದಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಲಾಗಿದೆ' ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಕುರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಸರ್ಕಾರಿ ವಕೀಲ ವಿಕ್ರಂ ಹುಯಿಲಗೋಳ ಅವರು ನ್ಯಾಯಪೀಠಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದರು.

ADVERTISEMENT

'ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಏಪ್ರಿಲ್ 17ರಂದು ಬೆಳಿಗ್ಗೆ 8 ರಿಂದ 10 ಗಂಟೆವರೆಗೆ ನಡೆದ ನಿಖಿಲ್‌ ವಿವಾಹಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಡಿವೈಎಸ್‌ಪಿ ಬಂದೋಬಸ್ತ್ ಮೇಲ್ವಿಚಾರಣೆ ವಹಿಸಿದ್ದರು. ಮದುವೆಯಲ್ಲಿ ವರ ಹಾಗೂ ವಧುವಿನ ಕುಟುಂಬಗಳಿಗೆ ಸೇರಿದ 80ರಿಂದ 95‌ ಜನ ಭಾಗವಹಿಸಿದ್ದರು. ಎಲ್ಲರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗಿತ್ತು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲಾಗಿತ್ತು.‌ ಮಾಂಗಲ್ಯ ಧಾರಣೆ ವೇಳೆ ಮಾತ್ರ ಕುಟುಂಬಸ್ಥರು ಮಾಸ್ಕ್ ಧರಿಸದೇ ಇರುವುದು ಕಂಡು ಬಂದಿದೆ' ಎಂದು ವಿವರಿಸಿದರು‌.

ಇದನ್ನು ಒಪ್ಪದ ನ್ಯಾಯಪೀಠ, 'ಮದುವೆಯಲ್ಲಿ 80ರಿಂದ 90 ಜನ ಭಾಗವಹಿಸಲು ಅನುಮತಿ ನೀಡಬಹುದಿತ್ತೇ, ಇದು ಲಾಕ್‌ಡೌನ್‌ ನಿಯಮ ಉಲ್ಲಂಘನೆ ಅಲ್ಲವೇ' ಎಂದು ಖಾರವಾಗಿ ಪ್ರಶ್ನಿಸಿದೆ.

'ಈ ಬಗ್ಗೆ ಏನು ಕ್ರಮ ಜರುಗಿಸಲಾಗುತ್ತದೆ ಎಂಬುದನ್ನು ತಿಳಿಸಬೇಕು' ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.