ADVERTISEMENT

ಹಗರಣಗಳ ತನಿಖೆ ಏನಾಯಿತು: ರೇವಣ್ಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 19:34 IST
Last Updated 5 ನವೆಂಬರ್ 2019, 19:34 IST
   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಹಲವು ಹಗರಣಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿದೆ ಎಂದು ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಟೀಕಿಸಿದ್ದಾರೆ.

ಕಳೆದ ನೂರು ದಿನಗಳಲ್ಲಿ ಎಚ್‌.ಡಿ.ದೇವೇಗೌಡ ಮತ್ತು ಅವರ ಕುಟುಂಬದವರನ್ನು ಟೀಕಿಸುವವರಿಗೆ ಹೆಚ್ಚಿನ ಅನುದಾನ ನೀಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಅಧಿಕಾರಕ್ಕೆ ಬಂದ ಹೊಸದರಲ್ಲಿ ಯಡಿಯೂರಪ್ಪ ಹೇಳಿದ್ದರು. ಆದರೆ, ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಕಾಮಗಾರಿಗಳ ಅನುದಾನಕ್ಕೆ ತಡೆ ನೀಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ADVERTISEMENT

ಐಎಂಎ ಸಂಸ್ಥೆಯಿಂದ ನಡೆದಿರುವ ಬಹುಕೋಟಿ ವಂಚನೆ,ಸಂಗೊಳ್ಳಿ ರಾಯಣ್ಣ ಸೌಹಾರ್ದ ಸಹಕಾರಿ ಸಂಘ, ಕಣ್ವ ಸೌಹಾರ್ದ ಸಹಕಾರಿ ಸಂಘಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ. ಸಹಕಾರಿ ಇಲಾಖೆ ವ್ಯಾಪ್ತಿಯ ಸಂಘಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಅಪೆಕ್ಸ್‌ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ವಿಚಾರಣೆಗೆ ಆದೇಶಿಸಿದ ಅಧಿಕಾರಿಯನ್ನು ಬೀದರ್‌ಗೆ ವರ್ಗಾಯಿಸಲಾಗಿದೆ. ಅವ್ಯವಹಾರವನ್ನು ಮುಚ್ಚಿ ಹಾಕಲು ಬೇರೊಬ್ಬ ಅಧಿಕಾರಿಯನ್ನು ಜಂಟಿ ನಿಬಂಧಕರ ಹುದ್ದೆಗೆ ನೇಮಿಸಲಾಗಿದೆ ಎಂದೂ ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.