ADVERTISEMENT

ಕೆಲಸಕ್ಕಾಗಿ ಪ್ರಧಾನಿ ನಕಲಿ ಶಿಫಾರಸು ಪತ್ರ ಕೊಟ್ಟಿದ್ದ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 11:18 IST
Last Updated 22 ಡಿಸೆಂಬರ್ 2018, 11:18 IST

ಬೆಳಗಾವಿ: ಹೈಕೋರ್ಟ್‌ನಲ್ಲಿ ಟೈಪಿಸ್ಟ್‌ ಕೆಲಸಕ್ಕಾಗಿ ಪ್ರಧಾನಿಯ ನಕಲಿ ಶಿಫಾರಸು ಪತ್ರ ಕೊಟ್ಟಿದ್ದ ಆರೋಪದ ಮೇಲೆ ಖಾನಾಪುರ ತಾಲ್ಲೂಕು ಗಂದಿಗವಾಡದ ನಿವಾಸಿ, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದ ಸಂಜಯಕುಮಾರ ಹುಡೇದ ಅವರನ್ನು ಎಪಿಎಂಸಿ ಠಾಣೆ ಪೊಲೀಸರು ಶನಿವಾರ ಬಂಧಿಸಿ, ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಖಾಲಿ ಇದ್ದ ಟೈಪಿಸ್ಟ್‌ ಹುದ್ದೆಗೆ 2017ರ ಮಾರ್ಚ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ್ದ ಸಂಜಯಕುಮಾರ ಅವರನ್ನು ದಾಖಲೆಗಳು ಸರಿ ಇಲ್ಲದ ಕಾರಣದಿಂದ ತಿರಸ್ಕರಿಸಲಾಗಿತ್ತು. ನಂತರ, ಅವರು ಪ್ರಧಾನ ಮಂತ್ರಿ ನೀಡಿದ್ದಾರೆ ಎನ್ನುವ ಶಿಫಾರಸು ಪತ್ರವನ್ನು ಹೈಕೋರ್ಟ್‌ನ ನೇಮಕಾತಿ ವಿಭಾಗಕ್ಕೆ ಅಂಚೆ ಮೂಲಕ ಕಳುಹಿಸಿ ಕೆಲಸ ‍ಪಡೆಯಲು ಯತ್ನಿಸಿದ್ದರು. ಆದರೆ, ನ್ಯಾಯಾಲಯದವರು ಶಿಫಾರಸು ಪತ್ರ ನಕಲಿ ಎನ್ನುವುದನ್ನು ಪತ್ತೆ ಹಚ್ಚಿದ್ದರು.

ಹೈಕೋರ್ಟ್‌ನ ಡೆಪ‍್ಯುಟಿ ರಿಜಿಸ್ಟ್ರಾರ್‌ ಎಂ.ರಾಜೇಶ್ವರಿ ಡಿ.17ರಂದು ಅರ್ಜಿದಾರ ಸಂಜಯ ವಿರುದ್ಧ ಕಬ್ಬನ್ ಪಾರ್ಕ್‌ ಠಾಣೆಗೆ ದೂರು ನೀಡಿದ್ದರು. ಅಲ್ಲಿನ ಪೊಲೀಸರ ಮನವಿ ಮೇರೆಗೆ ಎಪಿಎಂಸಿ ಠಾಣೆ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.