ADVERTISEMENT

ಬೆಳಗಾವಿ | ಕೆರೆಗೆ ಜಾಗಕ್ಕಾಗಿ 3 ವರ್ಷ ಹೊಸ ಬಟ್ಟೆ ತೊಡಲಿಲ್ಲ!

ಹಂದಿಗನೂರು ಗ್ರಾಮದ ವ್ಯಕ್ತಿಯ ಯಶಸ್ಸು

ಎಂ.ಮಹೇಶ
Published 8 ಜೂನ್ 2020, 20:49 IST
Last Updated 8 ಜೂನ್ 2020, 20:49 IST
ಬೆಳಗಾವಿಯಲ್ಲಿ ಜೋತಿಬಾ ಮನವಾಡಕರ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಅಭಿನಂದಿಸಿದರು
ಬೆಳಗಾವಿಯಲ್ಲಿ ಜೋತಿಬಾ ಮನವಾಡಕರ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಅಭಿನಂದಿಸಿದರು   

ಬೆಳಗಾವಿ: ತಾಲ್ಲೂಕಿನ ಹಂದಿನಗನೂರು ಗ್ರಾಮದ ಕೃಷಿಕ ಹಾಗೂ ಸಾಮಾಜಿಕ ಕಾರ್ಯಕರ್ತ ಜೋತಿಬಾ ಸುಭಾನ ಮನವಾಡಕರ ತಮ್ಮೂರಿನಲ್ಲಿ ಕೆರೆಗೆ ಸರ್ಕಾರದಿಂದ ಜಾಗ ಮಂಜೂರಾಗುವವರೆಗೆ ಹೊಸ ಬಟ್ಟೆ ತೊಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ.

ಮೂರು ವರ್ಷಗಳ ನಂತರ ಅವರ ಹೋರಾಟಕ್ಕೆ ಸ್ಪಂದನೆ ಸಿಕ್ಕಿದೆ. ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಜಾಗ ಮಂಜೂರು ಮಾಡಿಸಿದ್ದಾರೆ. ಜೋತಿಬಾ ಕಚೇರಿಗಳಿಗೆ ಅಲೆದಾಡಿ ಹಲವು ಬಾರಿ ಮನವಿ ಸಲ್ಲಿಸಿ ಬೆನ್ನತ್ತಿದ ಪರಿಣಾಮ ಊರಿಗೆ ಬರೋಬ್ಬರಿ 21 ಎಕರೆ ಗಾಯರಾಣ ಜಮೀನು ದೊರೆತಂತಾಗಿದೆ.

ಅವರನ್ನು ಈಚೆಗೆ ಗ್ರಾಮದಲ್ಲಿ ಭೇಟಿಯಾಗಿ ಅಭಿನಂದಿಸಿದ ಚಿತ್ರವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಟ್ಟಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಹಲವು ಮನವಿ:ಜೋತಿಬಾ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗೆ ಹಲವು ಬಾರಿ ಬಂದು ಮನವಿ ಸಲ್ಲಿಸಿ ಗಮನಸೆಳೆದಿದ್ದರು.

‘ಊರಿಗೊಂದು ಕೆರೆ ಬೇಕು. ಅದಕ್ಕಾಗಿ ಜಾಗ ನೀಡುವಂತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ 2017ರಲ್ಲಿ ಠರಾವು ಮಾಡಲಾಗಿತ್ತು. ಅದನ್ನು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗಿತ್ತು. ಆದರೆ, ಮಂಜೂರಾತಿ ದೊರೆತಿರಲಿಲ್ಲ. ಹೀಗಾಗಿ ನಾನು ಆ ವಿಷಯ ಹಿಡಿದುಕೊಂಡು ಕಚೇರಿಗಳಿಗೆ ಹೋಗುತ್ತಿದ್ದೆ’ ಎಂದು ಜೋತಿಬಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಗೆ ಜಾಗ ಮಂಜೂರಾಗುವವರೆಗೂ ಬೇರೆ ಶರ್ಟ್ ಹಾಕುವುದಿಲ್ಲ ಎಂದು ಶಪಥ ಮಾಡಿದ್ದೆ. ಒಂದು ಜೊತೆ ಶರ್ಟ್- ಪ್ಯಾಂಟನ್ನು ತೊಳೆದು ತೊಳೆದು ಹಾಕಿಕೊಳ್ಳುತ್ತಿದ್ದೆ. ಶರ್ಟ್ ಅಲ್ಲಲ್ಲಿ ಹರಿದು ಹೋಗಿತ್ತು. ಇದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ಬಂದಿತ್ತು. ಊರಿನ ಕೆಲವರು ಈ ಕೆಲಸ ಆಗುವುದಿಲ್ಲ ಎನ್ನುತ್ತಿದ್ದರು. ಕಾರ್ಯಕ್ರಮ ಒಂದರಲ್ಲಿ ನನ್ನ ಹೋರಾಟದ ವಿಷಯ ತಿಳಿದ ಶಾಸಕ ಸತೀಶ ಜಾರಕಿಹೊಳಿ ಅವರು ಜಾಗ ಮಂಜೂರಾಗಲು ಸಹಕರಿಸಿದರು. ಅವರೇ ಒಂದು ಜೊತೆ ಹೊಸ ಬಟ್ಟೆ ಕೊಡಿಸಿದ್ದು, ಈಗ ಅದನ್ನು ಧರಿಸುತ್ತಿದ್ದೇನೆ' ಎಂದು ಹೇಳಿದರು.

ಅನುಕೂಲವಾಗುತ್ತದೆ:‘ಊರಿನ ಜನರು ಉದ್ಯೋಗ ಖಾತ್ರಿ ಕೆಲಸಕ್ಕೆ ಬೇರೆ ಊರುಗಳಿಗೆ ಹೋಗುತ್ತಾರೆ. ಇದಕ್ಕಾಗಿ ಅವರಿಗೆ ಹಣ ಬೇಕಾಗುತ್ತದೆ. ಇಲ್ಲಿಯೇ ಕೆಲಸ ಸಿಕ್ಕರೆ ಅವರಿಗೆ ಅನುಕೂಲ. ಕೆರೆ ಕೆಲಸ ಆರಂಭವಾದರೆ ಐದಾರು ತಿಂಗಳು ಉದ್ಯೋಗ ಲಭ್ಯವಾಗಲಿದೆ’ ಎನ್ನುತ್ತಾರೆ ಅವರು.

‘ಆ ಗ್ರಾಮದಲ್ಲಿ ಕೆರೆಗ ಜಮೀನಿಗಾಗಿ ಜೋತಿಬಾ ಹೋರಾಟ ಮಾಡಿದ್ದರು. ನಾನೂ ಫಾಲೋಅಪ್‌ ಮಾಡಿದ್ದೆ. ಇತ್ತೀಚೆಗೆ ಜಾಗ ಸಿಕ್ಕಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ ನಿರ್ಮಾಣ ಕಾಮಗಾರಿಯನ್ನು ತಿಂಗಳಲ್ಲಿ ಆರಂಭಿಸಲಾಗುವುದು. ಮೊದಲಿಗೆ ಸುತ್ತಲೂ ಸಸಿಗಳನ್ನು ಹಾಕಿಸಲು ಯೋಜಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಪ್ರತಿಕ್ರಿಯಿಸಿದರು.

**

ಸರ್ಕಾರದಿಂದ ಜಾಗ ಮಂಜೂರಾಗಿರುವುದಕ್ಕೆ ಖುಷಿ ಆಗಿದೆ. ಆದರೆ, ಕೆರೆ ನಿರ್ಮಾಣ ಕಾಮಗಾರಿ ಆರಂಭವಾದರಷ್ಟೇ ಸಂಪೂರ್ಣ ಸಮಾಧಾನವಾಗಲಿದೆ
-ಜೋತಿಬಾ ಮನವಾಡಕರ,ಹಂದಿಗನೂರು, ಬೆಳಗಾವಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.