ಬೆಂಗಳೂರು: ಆರೋಗ್ಯ ಇಲಾಖೆಯ ನೂರಕ್ಕೂ ಹೆಚ್ಚು ನೌಕರರು ನಿಯೋಜನೆ ಮೇಲೆ ತೆರಳಿ ಒಂದು ದಶಕ ಕಳೆದಿದ್ದರೂ ರಾಜಕೀಯ ಪ್ರಭಾವ ಬಳಸಿಕೊಂಡು ಅನ್ಯ ಇಲಾಖೆ, ಪ್ರಾಧಿಕಾರಗಳಲ್ಲೇ ನೆಲೆಯೂರಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ–ಕಿರಿಯ ಆರೋಗ್ಯ ಸಹಾಯಕರು, ಮಹಿಳಾ–ಪುರುಷ ಆರೋಗ್ಯ ಸಹಾಯಕರು, ಪ್ರಾಥಮಿಕ ಆರೋಗ್ಯ ಅಧಿಕಾರಿಗಳು, ಶುಶ್ರೂಷಣಾ ಅಧಿಕಾರಿಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ಪ್ರಾಥಮಿಕ ಆರೋಗ್ಯ ಸೇವೆಯ ಕಾರ್ಯಕ್ಕೆ ನೇಮಕವಾಗಿದ್ದರೂ ಆ ಕೆಲಸಗಳನ್ನು ನಿರ್ವಹಿಸದೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಗಳಿಗೆ ನಿಯೋಜನೆಗೊಂಡು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ‘ಲಾಭದಾಯಕ ಹುದ್ದೆ’ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ ನಾಗರಿಕ ಸೇವಾ ನಿಯಮದ ಅನ್ವಯ ಒಂದು ಇಲಾಖೆಯಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ಕನಿಷ್ಠ 3 ವರ್ಷ, ಗರಿಷ್ಠ 5 ವರ್ಷ ನಿಯೋಜನೆ ಮೇಲೆ ತೆರಳಬಹುದು. ಅವಧಿ ಮುಗಿದ ತಕ್ಷಣ ಮಾತೃ ಇಲಾಖೆಗೆ ಮರಳಬೇಕಾಗುತ್ತದೆ. ಆದರೆ, ಆರೋಗ್ಯ ಇಲಾಖೆಯ 101 ನೌಕರರು ದಶಕದ ಹಿಂದೆ ಅನ್ಯ ಇಲಾಖೆ, ಪ್ರಾಧಿಕಾರಕ್ಕೆ ನಿಯೋಜನೆ ಮೇಲೆ ತೆರಳಿದ್ದು, ವಾಪಸ್ ಬರುವಂತೆ ಹಲವು ಬಾರಿ ಸುತ್ತೋಲೆ ಹೊರಡಿಸಿದರೂ ಮಾತೃ ಇಲಾಖೆಗೆ ಮರಳಿಲ್ಲ.
ಬಹುತೇಕ ನೌಕರರು ಬೃಹತ್ ಬೆಂಗಳೂರು ನಗರ ಪಾಲಿಕೆ (ಬಿಬಿಎಂಪಿ), ನಗರ ಪಾಲಿಕೆಗಳು, ನಗರಸಭೆ, ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿ ಆಹಾರ ಸುರಕ್ಷತಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.
ಕೋರ್ಟ್ ಆದೇಶಕ್ಕೂ ಇಲ್ಲ ಮನ್ನಣೆ: ಆಹಾರ ಸುರಕ್ಷತಾಧಿಕಾರಿಗಳ ಹುದ್ದೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯಕಾರಿ ಆದೇಶದ ಮೇಲೆ ಸೀಮಿತ ಅವಧಿಗೆ ನಿಯೋಜನೆಗೊಂಡಿದ್ದು, ನಂತರವೂ ಅದೇ ಹುದ್ದೆಯಲ್ಲಿ ಮುಂದುವರಿಯಲು ಹಕ್ಕು ಇರುವುದಿಲ್ಲ. ಆ ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ನೇಮಕಾತಿ ಮಾಡಬೇಕು ಎಂದು ಹೈಕೋರ್ಟ್ ಮಾರ್ಚ್ 2022ರಲ್ಲಿ ತೀರ್ಪು ನೀಡಿತ್ತು. ನಿಯೋಜನೆ ಮೇಲೆ ನೇಮಕಗೊಂಡವರಿಗೆ ಆಹಾರ ಸುರಕ್ಷತಾಧಿಕಾರಿಗಳ ಹುದ್ದೆಯ ಮೇಲೆ ಹಕ್ಕು ಇಲ್ಲ. ಆರೋಗ್ಯ ಇಲಾಖೆಯಿಂದಲೇ ಅವರ ವೇತನ, ಸೌಲಭ್ಯ ಪಡೆಯಬೇಕು ಎಂದು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಸಹ ಆಗಸ್ಟ್ 2023ರಲ್ಲಿ ಆದೇಶ ನೀಡಿತ್ತು.
ಸಿ–ವೃಂದಕ್ಕೆ ಬಿ–ವೃಂದದ ಅಧಿಕಾರ
ಯಾವುದೇ ಇಲಾಖೆಯ ನೌಕರರು ಆಹಾರ ಸುರಕ್ಷತಾ ಅಧಿಕಾರಿಗಳಾಗಿ ಕೆಲಸ ಮಾಡಬೇಕಾದರೆ ಆಹಾರ ತಂತ್ರಜ್ಞಾನ, ಕೃಷಿ ಪದವಿ, ಸೂಕ್ಷ್ಮಾಣು ಶಾಸ್ತ್ರ, ರಸಾಯನ ವಿಜ್ಞಾನ ವಿಷಯಗಳಲ್ಲಿ ಪದವಿ ಪಡೆದಿರಬೇಕು. ಆದರೆ, ನಿಯೋಜನೆಗೊಂಡ ಆರೋಗ್ಯ ಇಲಾಖೆಯ ಬಹುತೇಕ ನೌಕರರು ನಕಲಿ ಪ್ರಮಾಣಪತ್ರ ಸಲ್ಲಿಸಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ವ್ಯಾಪ್ತಿಯ ವೈದ್ಯರೊಬ್ಬರು ಆರೋಗ್ಯ ಇಲಾಖೆಗೆ ದೂರು
ಸಲ್ಲಿಸಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿಗಳ ಹುದ್ದೆಗೆ ನೇಮಕವಾಗುವವರು ಬಿ–ವೃಂದದ ಅಧಿಕಾರಿಯಾಗಿರಬೇಕು. ಈ ಹುದ್ದೆಗೆ ನಿಯೋಜನೆಗೊಂಡ ಆರೋಗ್ಯ ಇಲಾಖೆಯ ಬಹುತೇಕ ನೌಕರರು ಸಿ–ವೃಂದಕ್ಕೆ ಸೇರಿದ ಕಿರಿಯ ಹಾಗೂ ಹಿರಿಯ ಆರೋಗ್ಯ ಸಹಾಯಕರು.
ಆಹಾರ ಸುರಕ್ಷತೆ ಮಂಡಳಿ, ಆಹಾರ ಸುರಕ್ಷತೆ ಪ್ರಾಧಿಕಾರಗಳಲ್ಲಿ ಸಿಬ್ಬಂದಿ ಕೊರತೆಯ ಕಾರಣ 2013ರಲ್ಲಿ ಕಾರ್ಯಕಾರಿ ಆದೇಶದ ಮೇಲೆ ಆರೋಗ್ಯ ಇಲಾಖೆಯ ನೌಕರರನ್ನು ವಿಶೇಷ ಪ್ರಭಾರದ ಮೇಲೆ ಆರು ತಿಂಗಳಿಗೆ ನೇಮಕ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಮುಂದುರಿಕೆ ಆದೇಶವಿಲ್ಲದೇ, ನಿಯಮಕ್ಕೆ ವಿರುದ್ಧವಾಗಿ ಅದೇ ಹುದ್ದೆಗಳಲ್ಲಿ ಇದ್ದಾರೆ.
ಆರೋಗ್ಯ ಇಲಾಖೆ 2017, 2020, 2021ರಲ್ಲಿ ಸುತ್ತೋಲೆ ಹೊರಡಿಸಿ, ಮಾತೃ ಇಲಾಖೆಗೆ ಮರಳುವಂತೆ ಸೂಚಿಸಿತ್ತು. ಈಗ ಮತ್ತೊಂದು ಸುತ್ತೋಲೆ ಹೊರಡಿಸಲಾಗಿದೆ.
ಆಹಾರ ಸುರಕ್ಷತಾಧಿಕಾರಿಗಳ ಕೊರತೆಯ ಕಾರಣ ಹಿಂದೆ ನಿಯೋಜನೆಗೆ ಅವಕಾಶ ನೀಡಿರಬಹುದು. ಈಗ ಎಲ್ಲರನ್ನೂ ವಾಪಸ್ ಕರೆಸಿಕೊಳ್ಳಲಾಗುತ್ತಿದೆ.–ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.