ADVERTISEMENT

ಆರೋಗ್ಯ ರಕ್ಷಣೆಗೆ ಖಾಸಗಿಯವರ ಸಾಥ್‌

ನೆರೆಯಿಂದ ಸಾಂಕ್ರಾಮಿಕ ರೋಗ ಭೀತಿ: ನಿಯಂತ್ರಣಕ್ಕೆ ಇಲಾಖೆ ಸಿದ್ಧತೆ

ಎಂ.ಮಹೇಶ
Published 13 ಆಗಸ್ಟ್ 2019, 9:41 IST
Last Updated 13 ಆಗಸ್ಟ್ 2019, 9:41 IST
ಬೆಳಗಾವಿಯ ವಡಗಾವಿಯಲ್ಲಿ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್‌ ಆಸ್ಪತ್ರೆಯಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಉಚಿತವಾಗಿ ನಡೆಸಲಾಯಿತು
ಬೆಳಗಾವಿಯ ವಡಗಾವಿಯಲ್ಲಿ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್‌ ಆಸ್ಪತ್ರೆಯಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಉಚಿತವಾಗಿ ನಡೆಸಲಾಯಿತು   

ಬೆಳಗಾವಿ: ನೆರೆಪೀಡಿತ ಪ್ರದೇಶಗಳ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದ್ದು, ಖಾಸಗಿ ಆಸ್ಪತ್ರೆಗಳವರು ಕೂಡ ಕೈಜೋಡಿಸಿದ್ದಾರೆ. ತಪಾಸಣಾ ಶಿಬಿರಗಳನ್ನು ಆಯೋಜಿಸಿ, ಔಷಧಗಳನ್ನು ವಿತರಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರವಾಹದ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಸಮಸ್ಯೆ ಪ್ರಮುಖವಾಗಿ ಕಾಡುತ್ತದೆ. ನೆಗಡಿ, ಕೆಮ್ಮು, ಜರ, ಡಯೇರಿಯಾ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಪ್ರವಾಹಪೀಡಿತ ಪ್ರದೇಶಗಳ ಜನರು ಇವುಗಳಿಂದ ದೂರಾಗುವಂತೆ ನೋಡಿಕೊಳ್ಳಬೇಕಾದ ಸವಾಲನ್ನು ಆರೋಗ್ಯ ಇಲಾಖೆ ಎದುರಿಸಬೇಕಾಗಿದೆ.

‘ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯ ಔಷಧಗಳ ದಾಸ್ತಾನಿದೆ. ಅಲ್ಲದೇ, ಸ್ಥಳೀಯವಾಗಿಯೂ ಖರೀದಿಸುವಂತೆ ಬೆಳಗಾವಿ ವಿಭಾಗದ ಎಲ್ಲ ಡಿಎಚ್‌ಒಗಳಿಗೂ ಸೂಚಿಸಲಾಗಿದೆ. ಒಆರ್‌ಎಸ್‌ ಪಾಕೆಟ್‌ಗಳನ್ನು ಎಲ್ಲ ಪುನರ್ವಸತಿ ಕೇಂದ್ರಗಳಿಗೂ ವಿತರಿಸಲಾಗಿದೆ. ಕೆಲವೇ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದಾಗಿ, ಶುದ್ಧ ಕುಡಿಯುವ ನೀರಿನ ಪೂರೈಕೆ ಮಹತ್ವ ಪಡೆದುಕೊಳ್ಳುತ್ತದೆ. ಕ್ಲೋರಿನೇಷನ್‌ಗೆ ಆದ್ಯತೆ ನೀಡುವಂತೆ ಸ್ಥಳೀಯ ಸಂಸ್ಥೆಗಳನ್ನು ಕೋರಲಾಗಿದೆ’ ಎಂದು ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ.ಅಪ್ಪಾಸಾಹೇಬ ನರಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬ್ಲೀಚಿಂಗ್ ಪೌಡರ್‌ಗೆ ಬೇಡಿಕೆ:

‘ಆರೋಗ್ಯ ಶಿಕ್ಷಣದ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ಬೇಕಾದ ಪ್ರಚಾರ ಸಾಮಗ್ರಿಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಬಹಳ ಹೆಚ್ಚಿನ ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್ ಬೇಕಾಗುತ್ತದೆ. ಪೂರೈಸುವಂತೆ ಕಂದಾಯ ಇಲಾಖೆಯನ್ನು ಕೋರಲಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ)ದಲ್ಲಿ ಜಿಲ್ಲಾಸ್ಪತ್ರೆಗೆ ₹ 25 ಲಕ್ಷ, ತಾಲ್ಲೂಕು ಆಸ್ಪತ್ರೆಗೆ ₹ 10 ಲಕ್ಷ, ಸಮುದಾಯ ಆರೋಗ್ಯ ಕೇಂದ್ರಕ್ಕೆ ₹ 5 ಲಕ್ಷ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹ 50ಸಾವಿರ ಕೊಡಲಾಗಿದೆ. ಹಾವು ಅಥವಾ ನಾಯಿ ಕಡಿತ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲು ಅಗತ್ಯವಾದ ಔಷಧಗಳ ದಾಸ್ತಾನಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸರ್ಕಾರದ 40 ಆಂಬ್ಯುಲೆನ್ಸ್‌ಗಳಿವೆ. ಖಾಸಗಿಯವರೂ ಆಂಬ್ಯುಲೆನ್ಸ್‌ ಬಳಸಿಕೊಳ್ಳಲು ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.

ಮೈಸೂರು, ಬೆಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಬರುತ್ತಿರುವ ವೈದ್ಯರ ತಂಡದವರು, ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಿವಿಧ ಶಾಖೆಗಳ ಪ್ರತಿನಿಧಿಗಳು ಸಂತ್ರಸ್ತರ ಆರೋಗ್ಯ ತಪಾಸಣೆ ಶಿಬಿರಗಳನ್ನು ಉಚಿತವಾಗಿ ನಡೆಸುತ್ತಿದ್ದಾರೆ ಮತ್ತು ಸಲಹೆಗಳನ್ನು ನೀಡುತ್ತಿದ್ದಾರೆ. ಅಗತ್ಯ ಔಷಧಗಳನ್ನು ಕೂಡ ಪೂರೈಸುತ್ತಿದ್ದಾರೆ. ರಾಜ್ಯದ ಹಲವು ಸಂಘ–ಸಂಸ್ಥೆಗಳು ಸಹ ಔಷಧ ಪೂರೈಕೆ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.