ADVERTISEMENT

ಪಿಎಸ್‌ಐ ಹಗರಣ | ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ: ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 13:08 IST
Last Updated 6 ಜುಲೈ 2022, 13:08 IST
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ ಬುಧವಾರ ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇದ್ದರು
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ ಬುಧವಾರ ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇದ್ದರು   

ಚಾಮರಾಜನಗರ: ‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಿಎಸ್‌ಐ ನೇಮಕಾತಿ ಹಗರಣದ ತನಿಖೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳನ್ನು ಬಂಧಿಸಿರುವ ಯಾವುದಾದರೂ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಗೃಹ ಸಚಿವರ ರಾಜೀನಾಮೆಗೆ ವಿರೋಧ ‌ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿರುವ ಬಗ್ಗೆ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ತನಿಖೆಯ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಅನೇಕ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಹಗರಣದ ಬಗ್ಗೆ ಈ ರೀತಿಯ ಗಂಭೀರ ತನಿಖೆಯಾಗಿಲ್ಲ. ಕಾಂಗ್ರೆಸ್‌ ಸರ್ಕಾರ ಎಲ್ಲ ಹಗರಣಗಳನ್ನು, ತನಿಖಾ ವರದಿಗಳನ್ನು ಮುಚ್ಚಿ ಹಾಕಿತ್ತು. ಕೆಂಪಣ್ಣ ಆಯೋಗದ ವರದಿ ಏನಾಯ್ತು? ರಿಡೂ ಪ್ರಕರಣ ಏನಾಯ್ತು ಎಂಬುದನ್ನುನೋಡಿದ್ದೇವೆ. ಇಂತಹ ಬಹಳಷ್ಟು ವಿಚಾರಗಳಿವೆ. ಈ ಬಗ್ಗೆ ಮಾತನಾಡದೇ ಇದ್ದರೆ ಕಾಂಗ್ರೆಸ್‌ನವರಿಗೇ ಒಳ್ಳೆಯದು’ ಎಂದರು.

ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಗೆ ವಿವಿಧ ಕ್ಷೇತ್ರಗಳಿಂದ ಆಹ್ವಾನ ಬರುತ್ತಿರುವುದರ ಬಗ್ಗೆ ಕೇಳಿದ್ದಕ್ಕೆ, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು. 224 ಕ್ಷೇತ್ರದಲ್ಲೂ ಅವರನ್ನು ಕರೆಯುವುದು ಸಹಜ. ಅವರ ಜಿಲ್ಲೆಯಲ್ಲಿ ಕೈ ಬಿಟ್ಟರೂ ಬೇರೆ ಜಿಲ್ಲೆಯವರು (ಬಾದಾಮಿ ಕ್ಷೇತ್ರ) ಕೈ ಹಿಡಿದರು. ‘ಈಗ ಬಾದಾಮಿ ಬಿಟ್ಟು ಬೇರೆ ಕಡೆ ಹೋಗುತ್ತೇನೆ’ ಎಂದರೆ ಏನರ್ಥ? ಅವರು ಏನು ಸಂದೇಶ ಕೊಡುತ್ತಿದ್ದಾರೆ? ದೊಡ್ಡ ನಾಯಕರು ಹಾಗೂ ಅಪಾರ ರಾಜಕೀಯ ಅನುಭವುಳ್ಳ ನಾಯಕರಾಗಿದ್ದುಕೊಂಡು ಚುನಾವಣೆಯಿಂದ ಚುನಾವಣೆಗೆ ಬೇರೆ ಬೇರೆ ಕ್ಷೇತ್ರ ಹುಡುಕುವುದು ಸರಿಯಲ್ಲ’ ಎಂದು ಸುಧಾಕರ್‌ ಉತ್ತರಿಸಿದರು.

ADVERTISEMENT

ಚಾಮರಾಜನಗರ ಆಮ್ಲಜನಕ ದುರಂತದ ತನಿಖಾ ವರದಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು. ‘ನ್ಯಾಯಾಂಗ ತನಿಖೆಯ ವರದಿ ಬಂದಿದೆ. ಆರೋಗ್ಯ ಇಲಾಖೆ ಅದನ್ನು ಅಧ್ಯಯನ ಮಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.