ADVERTISEMENT

ಸಾಂಕ್ರಾಮಿಕವಲ್ಲದ ಕಾಯಿಲೆ ಪತ್ತೆಗೆ ತಪಾಸಣೆ: ಸಚಿವ ಡಾ.ಕೆ. ಸುಧಾಕರ್

ಸಚಿವ ಡಾ.ಕೆ. ಸುಧಾಕರ್ ಸೂಚನೆ l ಇಂದಿನಿಂದ 15 ದಿನ ವಿಶೇಷ ಅಭಿಯಾನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 18:40 IST
Last Updated 16 ಸೆಪ್ಟೆಂಬರ್ 2022, 18:40 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಬೆಂಗಳೂರು: ‘ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದಾಗಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಆದ್ದರಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಪತ್ತೆ ಮಾಡಬೇಕು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಪ್ರಯುಕ್ತ 15 ದಿನಗಳ ಕಾಲ ಜನರ ಆರೋಗ್ಯ ರಕ್ಷಣೆಯ ವಿಶೇಷ ಅಭಿಯಾನವನ್ನು ಇಲಾಖೆ ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) ಶನಿವಾರ ಚಾಲನೆ ದೊರೆಯಲಿದೆ. ಮುನ್ನಾದಿನವಾದ ಶುಕ್ರವಾರ ಈ ಅಭಿಯಾನದ ಬಗ್ಗೆ ಡಾ.ಕೆ. ಸುಧಾಕರ್ ಅವರು ವಿವಿಧ ಆಸ್ಪತ್ರೆಗಳ ನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳ ಜತೆಗೆ ಸಭೆ ನಡೆಸಿದರು.

‘ಸಾಂಕ್ರಾಮಿಕವಲ್ಲದ ರೋಗಗಳನ್ನು ಆರೋಗ್ಯ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಪತ್ತೆ ಮಾಡಬೇಕು. ಕ್ಯಾನ್ಸರ್‌ ತಪಾಸಣೆ ಯನ್ನೂ ನಡೆಸಬೇಕು. ಜಿಲ್ಲಾ ಮಟ್ಟ ಅಥವಾ ತಾಲ್ಲೂಕು ಮಟ್ಟದಲ್ಲಿ ತಪಾಸಣೆ ವ್ಯವಸ್ಥೆ ಮಾಡಿ, ಜನರೇ ಮುಂದೆ ಬಂದು ತಪಾಸಣೆ ಮಾಡಿಸಿಕೊಳ್ಳಲು ಅರಿವು ಮೂಡಿಸಬೇಕು. ಐದು ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮ ನಡೆಯಬೇಕು. 8, 9 ಹಾಗೂ 10 ವರ್ಷದ ಮಕ್ಕಳಿಗೆ ಕಣ್ಣಿನ ತಪಾಸಣೆ ನಡೆಸಬೇಕು’ ಎಂದು ಸೂಚಿಸಿದರು.

ADVERTISEMENT

1ಕೋಟಿ ಕಾರ್ಡ್ ಗುರಿ: ‘ಆಯುಷ್ಮಾನ್‌ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ 35 ಲಕ್ಷ ಜನರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಇನ್ನೂ 65 ಲಕ್ಷದಷ್ಟು ಕಾರ್ಡ್‌ಗಳನ್ನು ಆದಷ್ಟು ಬೇಗ ನೀಡಿ, 1 ಕೋಟಿಯ ಗುರಿ ತಲುಪಬೇಕು. ದೇಶ ದಲ್ಲಿಯೇ ಕರ್ನಾಟಕ ಈ ಸಾಧನೆಯನ್ನ ಮೊದಲು ಮಾಡಬೇಕು’ ಎಂದರು.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್‌, ‘ರಾಜ್ಯದಲ್ಲಿ 248 ರಕ್ತನಿಧಿ ಕೇಂದ್ರಗಳಿವೆ.ರಕ್ತ ಸಂಗ್ರಹ ಪ್ರಮಾಣ ಹೆಚ್ಚಿಸಲು ಇವುಗಳಿಗೆ ಸೂಚನೆ ನೀಡಬೇಕು. ಕ್ಷಯ ಮುಕ್ತ ಅಭಿಯಾನದ ಬಗ್ಗೆಯೂ ಅರಿವು ಮೂಡಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.