ADVERTISEMENT

H3H2 ಸೋಂಕು ಅಪಾಯಕಾರಿಯಲ್ಲ, ರಾಜ್ಯದಲ್ಲಿ 26 ಪ್ರಕರಣ ವರದಿ: ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 10:25 IST
Last Updated 6 ಮಾರ್ಚ್ 2023, 10:25 IST
ಸಚಿವ ಡಾ.ಕೆ. ಸುಧಾಕರ್
ಸಚಿವ ಡಾ.ಕೆ. ಸುಧಾಕರ್   

ಬೆಂಗಳೂರು: ‘ಎಚ್‌3ಎನ್‌2 ಸೋಂಕು ಅಪಾಯಕಾರಿಯಲ್ಲ. ರಾಜ್ಯದಲ್ಲಿ ಈವರಗೆ 26 ಪ್ರಕರಣಗಳು ವರದಿ ಆಗಿವೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಎಚ್‌3ಎನ್‌2 ಸೋಂಕು ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ಜೊತೆ ಸೋಮವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು,‌ ‘ಎಚ್‌3ಎನ್2 ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸಲಾಗುವುದು. ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು‘ ಎಂದರು.

‘ಕೋವಿಡ್ ಮಾದರಿಯಲ್ಲಿ ಈ ಸೋಂಕಿನ ತಪಾಸಣೆ ನಡೆಸಲಾಗುತ್ತದೆ. ತಪಾಸಣೆಗೆ ಹೆಚ್ಚು ದರ ಪಡೆಯಲಾಗುತ್ತಿದೆ. ಇದನ್ನು ನಿಯಂತ್ರಿಸಲು ಸಮಿತಿ ರಚಿಸಲಾಗುವುದು. ಸಮಿತಿಯ ವರದಿ ಬಂದ ಬಳಿಕ ದರ ನಿಗದಿ ಮಾಡಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ದೇಶದಲ್ಲಿ ಎಚ್‌3ಎನ್‌2 ಸೋಂಕು ಹೆಚ್ಚು ವರದಿಯಾಗುತ್ತಿರುವುದರಿಂದ ಜನರು ಗಾಬರಿಯಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗಿದೆ. ಗಾಬರಿಪಡುವ ಯಾವುದೇ ಸ್ಥಿತಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ’ ಎಂದರು.

‘ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಆದರೆ, ಈಗ ಆಸ್ಪತ್ರೆಯಲ್ಲಿ ಮಾಸ್ಕ್ ಧರಿಸುತ್ತಿಲ್ಲ. ಎಲ್ಲ ಆರೋಗ್ಯ ಸಿಬ್ಬಂದಿ ಮಾಸ್ಕ್‌ ಧರಿಸಬೇಕು. ಈ ಬಗ್ಗೆ ಆದೇಶ ಹೊರಡಿಸಲಾಗುವುದು‘ ಎಂದರು‌.

‘ಇನ್ಫ್ಲುಯೆಂಜಾ ಲಸಿಕೆಯನ್ನು ಆರೋಗ್ಯ ಸಿಬ್ಬಂದಿ ಪಡೆದುಕೊಳ್ಳಬೇಕು. ವರ್ಷಕ್ಕೆ ಒಂದು ಬಾರಿ ತೆಗೆದುಕೊಳ್ಳುವ ಲಸಿಕೆ ಪಡೆಯಲು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೂಚನೆ ನೀಡಲಾಗುವುದು. ಐಸಿಯುನಲ್ಲಿ ಕೆಲಸ ಮಾಡುವವರು ಹಾಗೂ ಸಿಬ್ಬಂದಿಗೆ ಸರ್ಕಾರದಿಂದ ಲಸಿಕೆ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ‍‘ ಎಂದರು.

‘15 ವರ್ಷದ ಕೆಳಗಿನ ಮಕ್ಕಳಿಗೆ ಹಾಗೂ 65 ವರ್ಷ ದಾಟಿದ ವೃದ್ದರಿಗೆ ಎಚ್‌3ಎನ್‌2 ಸೋಂಕು ಸುಲಭವಾಗಿ ತಗುಲಬಹುದು‌. ಗರ್ಭಿಣಿಯರಿಗೂ ಸೋಂಕು ತಗುಲುವ ಸಾಧ್ಯತೆಗಳಿವೆ. ಅವರೆಲ್ಲ ಎಚ್ಚರಿಕೆಯಿಂದ ಇರಬೇಕು. ಅನಗತ್ಯ ಗುಂಪು ಸೇರಬಾರದು. ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು‘ ಎಂದು ಮನವಿ ಮಾಡಿದರು.

‘ಅಂಕಿ - ಅಂಶಗಳು ನೋಡಿದಾಗ ಆತಂಕಪಡುವ ಅಗತ್ಯ ಇಲ್ಲ. ಜನವರಿ, ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಕರ್ನಾಟಕದಲ್ಲಿ ಎಚ್1ಎನ್1 20, ಎಚ್‌3ಎನ್‌2 26, ಇನ್ಫ್ಲುಯೆಂಜಾ ಬಿ 10 ಹಾಗೂ ಅಡೆನೋ ವೈರಸ್ 60 ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಎಚ್‌3ಎನ್‌2 ಎರಡು ಪ್ರಕರಣಗಳಿವೆ. ಅನಗತ್ಯವಾಗಿ ಗುಂಪು ಸೇರುವುದು ಕಡಿಮೆ ಮಾಡಬೇಕು’ ಎಂದರು.

‘ಬೇಸಿಗೆ ಆಗಿರುವುದರಿಂದ ತಾಪಮಾನ ಏರಿಕೆ ಆಗಿದೆ. ಬದಲಾದ ಪರಿಸರ ವಾತಾವರಣದಿಂದ ತಾಪಮಾನ ಹೆಚ್ಚಾಗುತ್ತಿದೆ. ಬಿಸಿ‌ಗಾಳಿಗೆ ಸಾಕಷ್ಟು ಜನರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಬಿಸಿಲಿನಲ್ಲಿ ಅನಗತ್ಯ ಓಡಾಟ ಕಡಿಮೆ ಮಾಡಬೇಕು.‌ ಬೆಳಿಗ್ಗೆ 11ರಿಂದ‌ 3 ಗಂಟೆವರೆಗೆ ಬಿಸಿಲಿನ ಓಡಾಟ ಕಡಿಮೆ ಮಾಡಿ. ಹೆಚ್ಚು ನೀರನ್ನು ಪ್ರತಿನಿತ್ಯ ಕುಡಿಯಬೇಕು‘ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.